ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ನಾಡಹಬ್ಬಕ್ಕೆ ಖ್ಯಾತ ಕವಿ ಕೆ.ಎಸ್.ನಿಸಾರ್ ಅಹಮದ್ ಚಾಲನೆ ನೀಡಲಿದ್ದಾರೆ. ಇನ್ನು ಕೆಲವೇ ದಿನಗಳು ಬಾಕಿ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ.
ದಸರಾ ಎಂದರೆ ಪ್ರಮುಖ ಆಕರ್ಷಣೆ ಜಂಬೂಸವಾರಿ. ಹೀಗಾಗಿಯೇ ಅರ್ಜುನ ಅಂಡ್ ಟೀಂಗೆ ಚಿನ್ನದ ಅಂಬಾರಿ ತೂಕದ ಮರಳು ಹೊರುವ ತಾಲೀಮು, ಮರದ ಅಂಬಾರಿ ಹೊರುವ ತಾಲೀಮು ನಡೆದಿದೆ. ಸಿಡಿಮದ್ದು ಸಿಡಿಸುವಾಗ ಗಜಪಡೆ ಮತ್ತು ಅಶ್ವಪಡೆ ಬೆದರದಿರಲಿ ಎಂಬ ಕಾರಣದಿಂದ ಕುಶಾಲತೋಪು ಸಿಡಿಸಿ ತಾಲೀಮು ನೀಡಲಾಗುತ್ತಿದೆ.
ಮಳೆಯಲ್ಲೂ ಶುಚಿ ಕಾರ್ಯ
ದಸರಾ ಮೆರವಣಿಗೆ ಸಾಗುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ತಿಲಕ್ ನಗರ, ಬಂಬೂಬಜಾರ್, ಬನ್ನಿಮಂಟಪದವರೆಗೆ ಶುಚಿ ಕಾರ್ಯ, ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗುತ್ತಿದೆ. ಮೈಸೂರಿನ ಪ್ರಮುಖ ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ ಕಾರ್ಯ ನಡೆಯುತ್ತಿದೆ. ಮಳೆಯ ನಡುವೆಯೂ ಅರಮನೆ ಆವರಣ ಶುಚಿಗೊಳಿಸುವುದು, ಅರಮನೆಯ ವಿದ್ಯುತ್ ದೀಪಾಲಂಕಾರದ ದುರಸ್ತಿ, ಹೊಸ ಬಲ್ಬ್ ಗಳ ಜೋಡಣಾ ಕಾರ್ಯ, ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡಿದೆ. ಮಳೆಯ ನಡುವೆಯೂ ಯಾವುದೇ ಅಡ್ಡಿಯಿಲ್ಲದೆ ಸಕಲ ಕಾರ್ಯಗಳು ನಡೆಯುತ್ತಿವೆ. ಈ ಮಧ್ಯೆ ಅಂಬಾರಿ ಹೊರುವ ಗಜಪಡೆ ಕ್ಯಾಪ್ಟನ್ ಅರ್ಜುನನಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ.
ಆಕರ್ಷಿಸುತ್ತಿರುವ `ಪವನಂತ್’
ಕಳೆದ ಬಾರಿಯಂತೆ ಈ ಬಾರಿಯೂ ‘ಆಗಸದಿಂದ ಮೈಸೂರು ವೀಕ್ಷಣೆ’ಯ ಹೆಲಿಕಾಪ್ಟರ್ ಜಾಲಿರೈಡ್ ನಡೆಯುತ್ತಿದೆ. `ಪವನಂತ್’ ಹೆಸರಿನ ಹೆಲಿಕಾಪ್ಟರ್ ಈ ಬಾರಿ ದಸರೆಯಲ್ಲಿ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಅಲ್ಲದೆ ಹೆಲಿಕಾಪ್ಟರ್ ಜಾಲಿರೈಡ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಇದರಿಂದ ಪ್ರವಾಸಿಗರ ಹೆಚ್ಚಾಗಲು ಇದು ಸಹ ಕಾರಣವಾಗಿದೆ.
ಖಾಸಗಿ ದರ್ಬಾರ್
ದಸರಾ ಮಹೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್. ಈ ಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ಸಮೇತರಾಗಿ ಈ ಬಾರಿ ಖಾಸಗಿ ದರ್ಬಾರ್ ನಲ್ಲಿ ಪಾಲ್ಗೋಳ್ಳಲಿದ್ದಾರೆ. ಇದಕ್ಕೆಂದೇ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗರ್ಭಿಣಿ ತ್ರಿಷಿಕಾ ದೇವಿ ಒಡೆಯರ್ ಮೈಸೂರಿಗೆ ಬಂದಿಳಿದಿದ್ದಾರೆ. ಖಾಸಗಿ ದರ್ಬಾರ್ ಗೆ ಸಂಬಂಧಿಸಿದಂತೆ ರತ್ನಖಚಿತ ಚಿನ್ನದ ಸಿಂಹಾಸನದ ಜೋಡಣೆ ಕಾರ್ಯ ನಡೆಯುತ್ತಿದ್ದು, ಅಂಬಾವಿಲಾಸ ಅರಮನೆ ನವರಾತ್ರಿ ಸಂಭ್ರಮಕ್ಕೆ ಮದುವಣಗಿತ್ತಿಯಂತೆ ಸಿದ್ಧವಾಗುತ್ತಿದೆ.