ವಿಶ್ವವಿಖ್ಯಾತ ಮೈಸೂರು ದಸರಾ: ಅರ್ಜುನ ತಂಡಕ್ಕೆ ಭಾರ ಹೊರುವ ತಾಲೀಮು ಶುರು

ಶನಿವಾರ, 2 ಸೆಪ್ಟಂಬರ್ 2017 (12:27 IST)
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ಹಿನ್ನೆಲೆಯಲ್ಲಿ ಗಜಪಡೆಗಳಿಗೆ ತಾಲೀಮು ಜೋರಾಗಿ ನಡೆಯುತ್ತಿದೆ.

ಮೊದಲ ತಂಡದಲ್ಲಿ ಬಂದ ಅರ್ಜುನ ನೇತೃತ್ವದ 7 ಆನೆಗಳು ಸೇರಿ 15 ಆನೆಗಳಿಗೆ ನಿನ್ನೆಯಿಂದ ಭಾರ ಹೊರುವ ತಾಲೀಮು ಶುರುವಾಗಿದೆ. ಗಜಪಡೆಯ ಕ್ಯಾಪ್ಟನ್ ಅರ್ಜುನನಿಗೆ ಸುಮಾರು 400 ಕೆಜಿ ಭಾರ ಹೊತ್ತು ಸಾಗಿದ.

ಭಾರ ಹೊತ್ತ ಅರ್ಜುನ ಎರಡನೇ ತಾಲೀಮು ಆರಂಭಿಸಿದ. ಅರ್ಜುನನಿಗೆ ಕುಮ್ಕಿ ಆನೆಗಳಾದ ವರಲಕ್ಷ್ಮಿ ಹಾಗೂ ಕಾವೇರಿ ಸಾಥ್ ನೀಡಿದರು. ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅರ್ಜುನ ಮತ್ತು ತಂಡ ಸಾಲಾಗಿ ನಗರದಲ್ಲಿ ಹೆಜ್ಜೆ ಹಾಕುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.

ಅರ್ಜುನನ ಬೆನ್ನಮೇಲೆ ಗಾದಿ ಮತ್ತು ನಮ್ದ ಇಟ್ಟು ತೊಟ್ಟಿಲು ಕಟ್ಟಿ, ಅದರಲ್ಲಿ ಸುಮಾರು 400 ಕೆಜಿಯಷ್ಟು ಮರಳು ಮೂಟೆಗಳನ್ನ ಹಾಕಿ ನಗರದಲ್ಲಿ ತಾಲೀಮು ಆರಂಭಿಸಲಾಗಿದೆ. ಅರ್ಜುನ , ಬಲರಾಮ, ಅಭಿಮನ್ಯು, ಗಜೇಂದ್ರನಿಗೆ ಈ ಬಾರಿ ಭಾರ ಹೊರುವ ತಾಲೀಮು ನೀಡಲಾಗ್ತಿದೆ. 15 ದಿನದ ಬಳಿಕ 750 ಕೆಜಿ ತೂಕದ ಮರದ ಅಂಬಾರಿ ಹೊರುವ ತಾಲೀಮು ಶುರುವಾಗಲಿದೆ. ಈ ಬಾರಿ 2 ಹೊಸ ಆನೆಗಳು ಸೇರ್ಪಡೆಯಾಗಿದ್ದು, ಎಲ್ಲಾ ಆನೆಗಳು ಸಹ ಸೌಮ್ಯವಾಗಿ ವರ್ತಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ