ಕೋರ್ಟ್ ಅನುಮತಿ ನೀಡಿದರೂ ನಕಾರ: ಪ್ರತಾಪ್ ಸಿಂಹ, ಪೊಲೀಸರ ನಡುವೆ ವಾಗ್ವಾದ
ಬುಧವಾರ, 8 ನವೆಂಬರ್ 2017 (10:41 IST)
ಚಿತ್ರದುರ್ಗ: ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ನ್ಯಾಯಾಲಯ ಅನುಮತಿ ನೀಡಿದರೂ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ತಡೆಯಲು ಯತ್ನಿಸಿದ ಘಟನೆ ನಡೆದಿದೆ.
ನಗರದ ಜಿ.ಜಿ.ಸಮುದಾಯ ಭವನದಲ್ಲಿ ವಿಚಾರ ಸಂಕಿರಣ ನಡೆಯಬೇಕಿತ್ತು. ಆದರೆ ಈ ಬಗ್ಗೆ ತಿಳಿದ ಜಿಲ್ಲಾಡಳಿತ ಹಾಗೂ ಪೊಲೀಸರು, ನ.7 ರಂದು ಬೆಳಗ್ಗೆಯಿಂದ ನ.10 ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಿತ್ತು. ಹೀಗಾಗಿ ಕಾರ್ಯಕ್ರಮಕ್ಕೆ ಅವಕಾಶ ಇರಲಿಲ್ಲ. ಸುದ್ದಿಗೋಷ್ಠಿಗೂ ಅವಕಾಶ ನೀಡಲಿಲ್ಲ. ಬಳಿಕ ಕೋರ್ಟ್ ನಿಂದ ಪ್ರತಾಪ್ ಸಿಂಹ ಅನುಮತಿ ಪಡೆದರೂ ನ್ಯಾಯಾಲಯದ ಆವರಣದಲ್ಲೇ ತಡೆದರು. ನ್ಯಾಯಾಲಯ ಅನುಮತಿ ನೀಡಿದ್ದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಸುದ್ದಿಗೋಷ್ಠಿ ನಡೆಸಲಿ. ನೀವು ಭಾಗವಹಿಸುವಂತಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಪ್ರತಾಪ ಸಿಂಹರನ್ನ ತಡೆದರು.
ಕಳೆದ ವರ್ಷವೂ ಇಲ್ಲಿಗೆ ಆಗಮಿಸಿದ್ದೆ. ಪ್ರತಿಭಟನಾ ಮೆರವಣಿಗೆಯೂ ಮಾಡಿದ್ದು, ಯಾವುದೇ ತೊಂದರೆಯಾಗಿರಲಿಲ್ಲ. ನಿಷೇಧಾಜ್ಞೆ ಪ್ರಕಾರ ಯಾವುದೇ ಬಹಿರಂಗ ಸಭೆ, ಸಮಾರಂಭ ನಡೆಸುವಂತಿಲ್ಲ. ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ನಾವು ನಿಗದಿತ ಸಂಖ್ಯೆಯ ಜನರನ್ನೊಳಗೊಂಡ ಸುದ್ದಿಗೋಷ್ಠಿ ನಡೆಸುತ್ತೇನೆ. ಸುದ್ದಿಗೋಷ್ಠಿ ನಡೆಸುವುದು ಈ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು. ಹಾಗಾಗಿ ನೀವು ಏಕೆ ನನ್ನನ್ನು ಸುದ್ದಿಗೋಷ್ಠಯಲ್ಲಿ ಭಾಗವಹಿಸಬೇಡಿ ಎನುತ್ತಿದ್ದೀರಿ? ಇದಕ್ಕೆ ಕಾರಣ ಕೊಡಿ ಎಂದು ಆಗ್ರಹಿಸಿದರು.