ಆ ಊರಲ್ಲಿ ಕಿರಾಣಿ ಅಂಗಡಿಗಳಿಗಿಂತ ಮದ್ಯದ ಅಂಗಡಿಗಳೇ ಹೆಚ್ಚಂತೆ... ಸಿಟ್ಟಿಗೆದ್ದ ಮಹಿಳೆಯರು ಮಾಡಿದ್ದೇನು ಗೊತ್ತಾ?
ಶನಿವಾರ, 4 ಆಗಸ್ಟ್ 2018 (16:39 IST)
ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಡಲಸಂಗ ಗ್ರಾಮದಲ್ಲಿ ಕಿರಾಣಿ ಅಂಗಡಿಗಳ ಸಂಖ್ಯೆಗಿಂತ ಸರಾಯಿ ಅಂಗಡಿಗಳೇ ಹೆಚ್ಚು ಇವೆ. ಹೀಗಾಗಿ ಅಕ್ರಮ ಸರಾಯಿ ಅಂಗಡಿಗಳು ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಬೇಕೆಂದು ಮಹಿಳೆಯರು ಗ್ರಾಮ ಪಂಚಾಯಿತಿಯ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮದಲ್ಲಿ ರಾಜಾರೋಷವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಸರಾಯಿ ಸೇವನೆಯಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿದ್ದು, ಹಲವಾರು ಜನ ಸಾವನ್ನಪ್ಪಿದ್ದಾರೆ. ಸರಾಯಿ ಕುಡಿದು ಸಾಲ ಮಾಡಿ ಸಾಲದ ಕಿರಿಕಿರಿ ತಾಳದೆ ಮತ್ತಿನ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ.
ಸರಾಯಿ ಮಾರಾಟ ಬಂದ್ ಮಾಡುವಂತೆ ಸಂಬಂಧಿಸಿದ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಸಹ ಯಾವುದೇ ಪ್ರಯೋಜನವಾಗಿಲ್ಲಾ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.