ವ್ಯವಸ್ಥೆ ಬದಲಾಗದಿದ್ರೆ ಪ್ರಜಾಪ್ರಭುತ್ವ ದುರ್ಬಲವಾಗುತ್ತೆ : ಸಿದ್ದರಾಮಯ್ಯ
ಗುರುವಾರ, 31 ಮಾರ್ಚ್ 2022 (07:39 IST)
ಬೆಂಗಳೂರು : ಚುನಾವಣಾ ವ್ಯವಸ್ಥೆ ಬದಲಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ.
ಇದರ ಸುಧಾರಣೆಯಾಗದೆ ಹೋದರೆ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಚುನಾವಣಾ ಸುಧಾರಣೆಗಳ ಬಗ್ಗೆ ಇಂದಿನ ಅಧಿವೇಶನದಲ್ಲಿ ಮಾತನಾಡಿ ಅವರು, ಪ್ರಜಾಪ್ರಭುತ್ವ ದುರ್ಬಲವಾದರೆ ಸಮಾಜ, ದೇಶ ದುರ್ಬಲವಾಗುತ್ತದೆ.
ಎಪ್ಪತ್ತರ ದಶಕದಿಂದ ಈಚೆಗೆ ಚುನಾವಣಾ ವ್ಯವಸ್ಥೆ ಕೆಡಲು ಆರಂಭವಾಯಿತು ಎಂದು ಸಭಾದ್ಯಕ್ಷರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದ್ದಾರೆ. ಚುನಾವಣಾ ವ್ಯವಸ್ಥೆ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಬಲಿಷ್ಠವಾಗುತ್ತಾ ಹೋಗಬೇಕಿತ್ತು.
ಆದರೆ ನಮ್ಮಲ್ಲಿ ದುರ್ಬಲವಾಗುತ್ತಾ ಹೋಗುತ್ತಿದೆ ಎಂಬ ಒಟ್ಟು ಅಭಿಪ್ರಾಯ ಸದನದಲ್ಲಿ ವ್ಯಕ್ತವಾಗಿದೆ. ಇದು ಅತ್ಯಂತ ಕಳವಳದ ಸಂಗತಿಯಾಗಿದೆ ಎಂದರು.
1971ರಿಂದ ನಾನು ರಾಜಕೀಯದಲ್ಲಿ ಭಾಗವಹಿಸಲು ಆರಂಭಿಸಿದೆ. ಆ ಸಂದರ್ಭದಲ್ಲಿ ನಾನು ಕಾನೂನು ಕಾಲೇಜಿನಲ್ಲಿ ಓದುತ್ತಿದ್ದೆ ಮತ್ತು ವಿದ್ಯಾರ್ಥಿ ಸಂಘಟನೆಯ ಮುಖಂಡನಾಗಿದ್ದೆ. ಆಗಿನ ಸಂಸತ್ ಚುನಾವಣೆಯಲ್ಲಿ ಹುಣಸೂರಿನ ಡಾ. ಹೆಚ್.ಎಲ್.ತಿಮ್ಮೇಗೌಡರ ಸಂಸ್ಥಾ ಕಾಂಗ್ರೆನ್ನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು.
ನಾನು ಆ ವೇಳೆಗೆ ಸಮಾಜವಾದಿ ಪಕ್ಷದ ಸದಸ್ಯನೂ ಆಗಿದ್ದೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಇಲ್ಲದಿರುವುದರಿಂದ ಸಂಸ್ಥಾ ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಪ್ರೊ.ನಂಜುಂಡಸ್ವಾಮಿ ಅವರು ನಮಗೆ ಹೇಳಿದ್ದರು. ಹಾಗಾಗಿ ನಾನು ನಮ್ಮೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರಕ್ಕೆ ಹೋಗಿದ್ದೆ ಎಂದು ನೆನಪಿಸಿಕೊಂಡರು.