ರಾಜ್ಯದಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಗೆ ಏರಿಕೆಯತ್ತ ಡೆಂಗಿ ಚಿಕುನ್‌ಗುನ್ಯಾ ಪ್ರಕರಣಗಳು

ಶನಿವಾರ, 16 ಅಕ್ಟೋಬರ್ 2021 (21:46 IST)
ಬೆಂಗಳೂರು: ರಾಜ್ಯದಲ್ಲಿ ಎಡೆ ಬಿಡದೆ ಸುರಿಯುತ್ತಿರುವ  ಮಳೆಯಿಂದಾಗಿ ರಾಜ್ಯದಲ್ಲಿ ಡೆಂಗಿ ಜ್ವರಕ್ಕೆ ಒಳಪಡುವವರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ.  ಕಳೆದ 15 ದಿನಗಳಲ್ಲಿ 776 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ ಎಂದು ಅರೋಗ್ಯ ಇಲಾಖೆ  ತಿಳಿಸಿದೆ. 
 
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ವರದಿಯಾಗಿವೆ. 16 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 100 ರ ಗಡಿ ದಾಟಿದೆ. ಈ ವರ್ಷ ಮೊದಲ ಆರು ತಿಂಗಳ ಅವಧಿಯಲ್ಲಿ ಡೆಂಗಿ ನಿಯಂತ್ರಣದಲ್ಲಿತ್ತು. ಮಳೆ ಹೆಚ್ಚಳವಾದ ಬಳಿಕ ಈ ಜ್ವರಕ್ಕೆ ಒಳಪಡುವವರ ಸಂಖ್ಯೆ ಏರುಗತಿ ಪಡೆದುಕೊಂಡಿದೆ ಎಂದು ಇಲಾಖೆ ಮಾಹಿತಿ ನೀಡಿದೆ. 
 
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಈ ವರ್ಷ ರಾಜ್ಯದಲ್ಲಿ ಯಾವುದೇ ಡೆಂಗಿ ಮರಣ ಪ್ರಕರಣ ವರದಿಯಾಗಿಲ್ಲ. ಆದರೆ, ಈ ಜ್ವರ ಎದುರಿಸಿದವರ ಸಂಖ್ಯೆ 4,287ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ 3,823 ಮಂದಿಯಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿತ್ತು. ಅವರಲ್ಲಿ 5 ಮಂದಿ ಮೃತಪಟ್ಟಿದ್ದರು ಎಂದಿದೆ. 
 
ಈ ವರ್ಷ ರಾಜಧಾನಿಯಲ್ಲಿ  ಅತೀ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, 756 ಮಂದಿಗೆ  ಡೆಂಗಿ ಜ್ವರ ಕಾಣಿಸಿಕೊಂಡಿದೆ. ಕಲಬುರಗಿಯಲ್ಲಿ- 338, ಉಡುಪಿಯಲ್ಲಿ- 312, ಶಿವಮೊಗ್ಗದಲ್ಲಿ- 305, ಕೊಪ್ಪಳದಲ್ಲಿ- 220, ದಕ್ಷಿಣ ಕನ್ನಡದಲ್ಲಿ- 206, ದಾವಣಗೆರೆಯಲ್ಲಿ- 209, ಬಳ್ಳಾರಿಯಲ್ಲಿ- 200, ವಿಜಯಪುರದಲ್ಲಿ- 190, ಹಾವೇರಿಯಲ್ಲಿ- 169, ಮಂಡ್ಯದಲ್ಲಿ- 161, ಗದಗದಲ್ಲಿ- 127, ಯಾದಗಿರಿಯಲ್ಲಿ- 122, ಬೀದರ್‌ನಲ್ಲಿ- 120, ತುಮಕೂರಿನಲ್ಲಿ- 117 ಹಾಗೂ ಚಿತ್ರದುರ್ಗದಲ್ಲಿ- 113 ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗೆ ಇವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
 
ಚಿಕುನ್‌ಗುನ್ಯಾ ಪ್ರಕರಣಗಳು: 
 
ರಾಜ್ಯದ 27 ಜಿಲ್ಲೆಗಳಲ್ಲಿ ಚಿಕುನ್‌ಗುನ್ಯಾ ಪ್ರಕರಣಗಳು ಕೂಡ ವರದಿಯಾಗಿವೆ. ಈವರೆಗೆ ಈ ಮಾದರಿಯ ಜ್ವರಕ್ಕೆ ಒಳಗಾದವರ ಸಂಖ್ಯೆ 1,415ಕ್ಕೆ ಏರಿಕೆಯಾಗಿದೆ. ಉತ್ತರ ಕನ್ನಡ, ರಾಯಚೂರು ಹಾಗೂ ದಕ್ಷಿಣ ಕನ್ನಡ ಬಿಟ್ಟು ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಕರಣಗಳು ಖಚಿತಪಟ್ಟಿವೆ. ಕಲಬುರಗಿ- 185, ಶಿವಮೊಗ್ಗ- 169, ಕೋಲಾರ- 108, ತುಮಕೂರು- 104 ಹಾಗೂ ಯಾದಗಿರಿ- 103, ಬೆಂಗಳೂರು ನಗರ 100 ಜಿಲ್ಲೆಯಲಗಳಲ್ಲಿ ಅಧಿಕ ಪ್ರಕರಣಗಳು ವರದಿಯಾಗಿದೆ, ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗಡೆ ಇವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ