ಬೆಂಗಳೂರು: ಸರ್ಕಾರಿ ಆರೋಗ್ಯ ಕ್ಷೇತ್ರವನ್ನ ಬಲಪಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗ ರಚಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಡೆಂಗ್ಯೂ ಪ್ರಕರಣಗಳನ್ನು ಒಂದು ತಿಂಗಳ ಮುಂಚಿತವಾಗಿಯೇ ತಿಳಿಯುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಒಂದು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರಿಂದ ಮುಂಚಿತವಾಗಿಯೇ ಮಾಹಿತಿ ಲಭ್ಯವಾಗಲಿದ್ದು, ಕೂಡಲೆ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡು ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನಗರದಲ್ಲಿ ಜುಲೈನಲ್ಲಿ 1649, ಆಗಸ್ಟ್ನಲ್ಲಿ 1589, ಸೆಪ್ಟಂಬರ್ನಲ್ಲಿ 416 ಪ್ರಕರಣಗಳು ಪತ್ತೆಯಾಗಿವೆ. ಮುಖ್ಯವಾಗಿ ಮಳೆಯಾಗಿ ನೀರು ನಿಂತ ಕಾರಣ ಸೊಳ್ಳೆಗಳ ಲಾರ್ವಾ ಉತ್ಪತ್ತಿಯಾಗಿರುವುದರಿಂದ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ.
ಈ ಸಂಬಂಧ ಎಲ್ಲಾ ಕಡೆ ಔಷಧಿ ಸಿಂಪಡಣೆ ಮಾಡಲಾಗುತ್ತಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಲು ಸೂಚನೆ ನಿಡಲಾಗಿದೆ. ಅಲ್ಲದೇ ಎಲ್ಲಾ ಆರೋಗ್ಯ ವೈದ್ಯಾಧಿಕಾರಿಗಳಿಗೆ ಹೆಚ್ಚು ನಿಗಾ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.