ಮಂಗಳೂರು: ಪ್ರಧಾನಿ ಮೋದಿ ಅಕ್ಟೋಬರ್ 29 ರಂದು ಸುಪ್ರಸಿದ್ಧ ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಒಂದು ದಿನ ಭಕ್ತಾದಿಗಳಿಗೆ ದೇವರ ದರ್ಶನ ಭಾಗ್ಯವಿರುವುದಿಲ್ಲ.
ಅಕ್ಟೋಬರ್ 28 ರ ಮಧ್ಯಾಹ್ನ 2 ಗಂಟೆಯಿಂದ ದಿನಾಂಕ 29 ರ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೇವಾಲಯದ ಮೂಲಗಳು ಹೇಳಿವೆ.
ಇದೇ ವೇಳೆ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿದ್ದು, ನೇರವಾಗಿ ಧರ್ಮಸ್ಥಳಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದಿಳಿಯುವ ಪ್ರಧಾನಿ ಮೋದಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಗುತ್ತದೆ. ತದನಂತರ ದೇವಾಲಯ ಪ್ರವೇಶಿಸಲಿರುವ ಪ್ರಧಾನಿ ಅಲ್ಲಿ 15 ನಿಮಿಷ ಕಳೆಯಲಿದ್ದಾರೆ. ಸುಮಾರು 11.30 ಕ್ಕೆ ದೇವಾಲಯಕ್ಕೆ ಆಗಮಿಸುವ ನಿರೀಕ್ಷೆಯಿದೆ.
ದೇವಾಲಯದ ಪ್ರಾರ್ಥನೆ, ಆರತಿ ಮಾಡಿ, ಪ್ರಸಾದ ಸ್ವೀಕರಿಸಿ ಸ್ವಲ್ಪವೇ ದೂರದಲ್ಲಿರುವ ಉಜಿರೆಗೆ ತೆರಳಲಿದ್ದಾರೆ. ಅಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದೇವಾಲಯದಲ್ಲಿ ಭದ್ರತೆ ವ್ಯವಸ್ಥೆ ಈಗಾಗಲೇ ಆರಂಭವಾಗಿದ್ದು, ಆಯ್ಕೆ ಮಾಡಿದ ಕೆಲವೇ ಅರ್ಚಕರು ದೇವಾಲಯದ ಒಳಗಿರುತ್ತಾರೆ. ಪ್ರಧಾನಿ ಮೋದಿಗೆ ಸ್ಥಳೀಯ ಶಾಸಕರು, ಸಂಸದರು ಸಾಥ್ ನೀಡಲಿದ್ದಾರೆ. ದೇವಾಲಯದ ಸುತ್ತ ಬಿಗಿ ಭದ್ರತೆಯಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ