ನಿನ್ನೆ ನಡೆದ ಠೇವಣಿದಾರರಿಗೆ 5 ಲಕ್ಷ ರೂ.ಗಳ ವಿಮೆ ಹಣ ವಿತರಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಲು ಅವಕಾಶ ಸಿಗದೆ ದಿವಾಳಿಗೊಳಗಾಗಿರುವ ಸಹಕಾರಿ ಬ್ಯಾಂಕುಗಳ ನೂರಾರು ಗ್ರಾಹಕರು ನಿರಾಸೆ ಅನುಭವಿಸಿದರು.ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಸುತ್ತ ನೆರೆದಿದ್ದ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ಸುಮಾರು 100 ಸಂಕಷ್ಟದಲ್ಲಿರುವ ಗ್ರಾಹಕರು, ತಮ್ಮ ಇಡೀ ಠೇವಣಿಯನ್ನು ವಾಪಸ್ ಕೊಡಿಸುವಂತೆ ಒತ್ತಾಯಿಸಿದರು.
'ನಾನು ಸುಮಾರು 40 ಲಕ್ಷ ಹಣವನ್ನು ಕಳೆದುಕೊಂಡಿದ್ದು, ಪಡೆದಿರುವ 5 ಲಕ್ಷ ಏನೂ ಅಲ್ಲ ಎಂದು ಗ್ರಾಹಕ ಪ್ರತಾಪ್ ಹೇಳಿದರು. ತನ್ನ ಪತ್ನಿ ಭವಾನಿಯೊಂದಿಗಿನ ಜಂಟಿ ಖಾತೆಯಲ್ಲಿ 9 ಲಕ್ಷ ಠೇವಣಿ ಇಟ್ಟಿದೆ. ಆದರೆ, ಈಗ 5 ಲಕ್ಷ ಸಿಕ್ಕಿರುವುದಾಗಿ ಹೇಳಿದ ಮತ್ತೋರ್ವ ಠೇವಣಿದಾರ ಶೇಷಗಿರಿ ರಾವ್, ತಮ್ಮ ಕುಟುಂಬ ಸಂಕಷ್ಟದಲ್ಲಿದ್ದು, ಉಳಿದ ಹಣ ಕೂಡಾ ಬೇಕಾಗಿದೆ ಎಂದರು. ಆರೋಪಿಗಳನ್ನು ಬಂಧಿಸಿ, ಶಿಕ್ಷೆ ಒದಗಿಸಬೇಕೆಂದು ಗ್ರಾಹಕರು ಪ್ರಹ್ಲಾದ್ ಜೋಶಿ ಹಾಗೂ ತೇಜಸ್ವಿ ಸೂರ್ಯ ಅವರನ್ನು ಒತ್ತಾಯಿಸಿದರು.