ಬಿಸಿಲೂರಿಗೆ ಜಿಲ್ಲಾಡಳಿತ ಜಾರಿಗೊಳಿಸಿದ ನೋಟೀಸ್ ಏನು ಗೊತ್ತಾ?
ಶುಕ್ರವಾರ, 23 ನವೆಂಬರ್ 2018 (15:45 IST)
ಬಿಸಿಲೂರಿಗೆ ಜಿಲ್ಲಾಡಳಿತ ಖಡಕ್ ನೋಟೀಸ್ ಜಾರಿಮಾಡಿದೆ.
ಬಿಸಿಲೂರು ಗ್ರಾಮ ಪಂಚಾಯಿತಿಯ ತೆರಿಗೆ ಸಂಗ್ರಹದಲ್ಲಿ ಕೊರತೆ ಉಂಟಾಗುತ್ತಿದ್ದು, ಕರ ವಸೂಲಿಗಾರರು ತಿಂಗಳ ಅಂತ್ಯದಲ್ಲಿ ಬಾಕಿಯಿರುವ ತೆರಿಗೆ ಸಂಗ್ರಹಿಸುವಂತೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ.
ಮನೆ, ನೀರು ಸೇರಿ ವಿವಿಧ ರೀತಿಯ ತೆರಿಗೆಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ ವಸೂಲಿಗಾರರು ತಿಂಗಳೊಳಗಗೆ ಸಂಗ್ರಹಿಸಬೇಕು. ಇಲ್ಲವಾದರೆ ಸೇವೆಯಿಂದ ವಜಾಗೊಳಿಸುವ ಖಡಕ್ ಎಚ್ಚರಿಕೆಯನ್ನೂ ಜಿಪಂ ಸಿಇಒ ನೀಡಿದ್ದಾರೆ ಎನ್ನಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ 179 ಗ್ರಾ.ಪಂ.ಗಳಿದ್ದು, ವಾರ್ಷಿಕ 20.15 ಕೋಟಿ ತೆರಿಗೆ ಸಂಗ್ರಹದ ಗುರಿಯಿದೆ. ಆದರೆ ಕಳೆದ ಸಾಲಿನಲ್ಲಿ ಕೇವಲ 1.49 ಕೋಟಿ ರೂ. ಮಾತ್ರ ಸಂಗ್ರಹಿಸಲಾಗಿದೆ. ಅಂದರೆ ಶೇ 7.40ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ. ಸಮರ್ಪಕವಾಗಿ ಹಣ ಸಂಗ್ರಹವಾಗದ ಕಾರಣ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸರ್ಕಾರ ಗ್ರಾ.ಪಂ.ಗಳ ಜನಸಂಖ್ಯೆ ಆಧಾರದ ಮೇಲೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿ ವರ್ಷ 10ರಿಂದ 35 ಲಕ್ಷ ರೂ.ವರೆಗೂ ಅನುದಾನ ನೀಡುತ್ತಿದೆ. ಉಳಿದಂತೆ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣದಿಂದಲೇ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಗ್ರಂಥಾಲಯ, ಆರೋಗ್ಯ, ಮನೆ, ನೀರು ಸೇರಿದಂತೆ ಶೇ.33ರಷ್ಟು ತೆರಿಗೆ ಹಣವನ್ನು ಸರ್ಕಾರಕ್ಕೆ ಪಾವತಿಸಿದರೆ, ಉಳಿದ ಶೇ.67ರಷ್ಟು ತೆರಿಗೆ ಹಣವನ್ನು ಸಿಬ್ಬಂದಿ ವೇತನ, ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು.
ಆದರೆ ಕರ ವಸೂಲಿಯಲ್ಲಿ ನಿರೀಕ್ಷಿತ ಮಟ್ಟ ತಲುಪದ ಕಾರಣ ಅಭಿವೃದ್ಧಿ ಹಾಗೂ ಆಡಳಿತ ನಿರ್ವಹಣೆ ಕಷ್ಟಕರವಾಗಿದೆ.
2014ರಲ್ಲಿಯೂ ಕರ ವಸೂಲಿಗಾರರಿಗೆ ಹೀಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಸುಧಾರಣೆ ಕಂಡಿರಲಿಲ್ಲ. ಈಗ ಪುನಃ ಅದೇ ಕ್ರಮ ಕೈಗೊಳ್ಳಲಾಗಿದೆ.