ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷಗಳು ಕಿಚಾಯಿಸಲು ಆರ್ ಎಸ್ಎಸ್ ಧ್ಯೇಯ ಗೀತೆ ಹಾಡಿದ್ದ ಡಿಕೆ ಶಿವಕುಮಾರ್ ಈಗ ಸ್ವಪಕ್ಷೀಯರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಮೊನ್ನೆಯಷ್ಟೇ ವಿಪಕ್ಷ ನಾಯಕ ಆರ್ ಅಶೋಕ್ ಗೆ ಟಾಂಗ್ ಕೊಡಲು ಆರ್ ಎಸ್ಎಸ್ ಧ್ಯೇಯ ಗೀತೆ ನಮಸ್ತೇ ಸದಾ ವತ್ಸಲೇ ಹಾಡನ್ನು ಹಾಡಿದ್ದರು. ಡಿಕೆಶಿ ಅಧಿವೇಶನದಲ್ಲಿ ಆರ್ ಎಸ್ಎಸ್ ಹಾಡು ಹಾಡಿದ್ದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದಕ್ಕಾಗಿ ಅವರು ಕ್ಷಮೆ ಯಾಚಿಸಬೇಕು ಎಂದು ನಿನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್ ಸಿ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದರು. ಅವರು ಏನು ಹೇಳಿದ್ರೂ ನಡೆಯುತ್ತದೆ ಎಂದು ಮೊನ್ನೆಯಷ್ಟೇ ಸಚಿವ ಸ್ಥಾನದಿಂದ ಪದಚ್ಯುತಿಗೊಂಡಿದ್ದ ಕೆಎನ್ ರಾಜಣ್ಣ ಟಾಂಗ್ ಕೊಟ್ಟಿದ್ದರು.
ಇದರ ನಡುವೆಯೇ ಇಂದು ಡಿಕೆಶಿ ತಮ್ಮ ಹಾಡಿಗೆ ಕ್ಷಮೆ ಯಾಚಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಒಂದು ವೇಳೆ ನಾನು ಮಾಡಿದ್ದು ತಪ್ಪು ಎಂದು ನೀವು ಭಾವಿಸುವುದಾದರೆ ಎಲ್ಲಾ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ಮತ್ತು ಇಂಡಿಯಾ ಒಕ್ಕೂಟದ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.