ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡಾ ಒಂದು. ಅದರೆ ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ. ಈ ಬಗ್ಗೆ ಈಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ 2,000 ರೂ. ಪ್ರತೀ ತಿಂಗಳು ಬರಲಿದೆ. ಆದರೆ ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಖಾತೆಗೆ ಜಮಾವಣೆಯಾಗಿಲ್ಲ. ಈ ಬಗ್ಗೆ ಮಹಿಳೆಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಎಲ್ಲೇ ಹೋದರೂ ಸರ್ಕಾರದ ಸಚಿವರು, ಶಾಸಕರು, ಅಧಿಕಾರಿಗಳಿಗೆ ಹಣ ಯಾವಾಗ ಬರುತ್ತದೆ ಎಂಬ ಪ್ರಶ್ನೆ ಬರುತ್ತಿದೆ.
ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಕೂಡಾ ಸದ್ಯದಲ್ಲೇ ಗೃಹಲಕ್ಷ್ಮಿ ಹಣ ಜಮಾವಣೆಗೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಾ ಇದೇ ಪ್ರಶ್ನೆ ಎದುರಾಗಿದೆ. ಮದ್ದೂರಿನಲ್ಲಿ ಜನಾಂದೋಲನ ಸಭೆಯಲ್ಲಿ ಡಿಕೆ ಶಿವಕುಮಾರ್ ವೇದಿಕೆಯಲ್ಲಿ ಭಾಷಣ ಮಾಡುವಾಗ ಗೃಹಲಕ್ಷ್ಮಿ ಹಣ ಬರುತ್ತೋ ಇಲ್ವೋ ಎಂದು ಕೇಳಿದರು. ಇದಕ್ಕೆ ಮಹಿಳೆಯರು ಬರುತ್ತಿಲ್ಲ ಎಂದು ಕೂಗಿದ್ದಾರೆ.
ತಕ್ಷಣವೇ ಸಮಜಾಯಿಷಿ ನೀಡಿದ ಡಿಕೆಶಿ, ಬರುತ್ತೆ, ಬರುತ್ತೆ ಕಾಯುತ್ತಿರಿ. ಎರಡು ತಿಂಗಳ ಹಣ ಮಾತ್ರ ಜಮಾವಣೆ ಆಗಿಲ್ಲ. ಈಗ ಅನುದಾನ ಬಿಡುಗಡೆಯಾಗಿದೆ. ಸದ್ಯದಲ್ಲೇ ನಿಮ್ಮ ಖಾತೆಗಳಿಗೆ ಹಣ ಬರಲಿದೆ ಎಂದಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎರಡು ತಿಂಗಳ ಹಣ ಒಟ್ಟಿಗೇ ಬಿಡುಗಡೆಯಾಗಿತ್ತು. ಅದಾದ ಬಳಿಕ ಜೂನ್, ಜುಲೈ ತಿಂಗಳಲ್ಲಿ ಹಣ ಬಿಡುಗಡೆಯಾಗಿರಲಿಲ್ಲ. ಈ ಹಣ ಆಗಸ್ಟ್ ವಾರಂತ್ಯದೊಳಗೆ ಜಮಾವಣೆ ಆಗಲಿದೆ ಎನ್ನಲಾಗಿದೆ.