ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಡಿಕೆ ಶಿವಕುಮಾರ್ ಅವರೇ ಬಿಜೆಪಿ ಪಾದಯಾತ್ರೆ ಪ್ಲ್ಯಾನ್ ಮಾಡಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ತಮ್ಮ ಪಕ್ಷದವರ ವಿರುದ್ಧವೇ ಬೀಡುಬೀಸಾದ ಹೇಳಿಕೆಗಳಿಂದ ಸುದ್ದಿಯಾಗುವ ಬಸನಗೌಡ ಯತ್ನಾಳ್ ಈಗ ಬಿವೈ ವಿಜಯೇಂದ್ರ ಜೊತೆ ಸೇರಿಕೊಂಡು ಡಿಕೆಶಿಯೇ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಪಾದ ಯಾತ್ರೆಯ ಪ್ಲ್ಯಾನ್ ಮಾಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದು ಸಂಚಲನ ಮೂಡಿಸಿದೆ.
ಮುಡಾ ಅಧ್ಯಕ್ಷ ಎಚ್ ವಿ ರಾಜೀವ್ ಬಿಜೆಪಿಯಲ್ಲಿದ್ದಾಗಲೇ ಹಗರಣ ನಡೆದಿತ್ತು. ಬಳಿಕ ಅವರನ್ನು ಕಾಂಗ್ರೆಸ್ ಗೆ ಸೇರಿಸಲಾಯಿತು. ಅವರನ್ನು ಯಾರು ಕಾಂಗ್ರೆಸ್ ಗೆ ಸೇರಿಸಿದರು ಎನ್ನೋದು ಎಲ್ಲರಿಗೂ ಗೊತ್ತಿದೆ. ಮುಡಾ ವಿಚಾರವಾಗಿ ಬಿ ವೈ ವಿಜಯೇಂದ್ರ ನಡೆಸುತ್ತಿರುವ ಹೋರಾಟದಲ್ಲಿ ಡಿಕೆಶಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಮುಡಾ ಹಗರಣ ವಿಚಾರವಾಗಿ ಬಿಜೆಪಿ ಆಗಸ್ಟ್ 3 ರಂದು ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಈ ಹೋರಾಟ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಮಾಡಿರುವ ಪ್ಲ್ಯಾನ್. ಡಿಸಿಎಂ ಡಿಕೆ ಶಿವಕುಮಾರ್ ಆದೇಶದಂತೇ ಪಾದಯಾತ್ರೆ ನಡೆಯುತ್ತಿದೆ. ಈ ಪಾದಯಾತ್ರೆಯಲ್ಲಿ ಹೊಂದಾಣಿಕೆ ರಾಜಕಾರಣವಿದೆ. ಡಿಕೆ ಮಾಡಿದ ಉಪಕಾರ ತೀರಿಸಲಿಕ್ಕೆ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.