ಬೆಂಗಳೂರು: ರಾಹುಲ್ ಗಾಂಧಿ ಹಾದಿಯಲ್ಲೇ ಹೋಗಿರುವ ಡಿಸಿಎಂ ಡಿಕೆ ಶಿವಕುಮಾರ್ ಹೊಸ ವರ್ಷಾಚರಣೆ ಮಾಡಲು ವಿದೇಶಕ್ಕೆ ತೆರಳಿದ್ದಾರೆ.
ಇಂದು 2024 ರ ಕೊನೆಯ ದಿನವಾಗಿದ್ದು ನಾಳೆಯಿಂದ ಹೊಸ ವರ್ಷ ಆರಂಭವಾಗಲಿದೆ. ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಲು ಕುಟುಂಬ ಸಮೇತರಾಗಿ ಡಿಕೆ ಶಿವಕುಮಾರ್ ವಿಮಾನವೇರಿದ್ದಾರೆ. ಈ ಮೂಲಕ ಕೆಲವು ದಿನ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಇದಕ್ಕೆ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ನ್ಯೂ ಇಯರ್ ಸೆಲೆಬ್ರೇಷನ್ ಗೆ ವಿಯೆಟ್ನಾಂಗೆ ತೆರಳಿದ್ದರು. ಇದನ್ನು ಬಿಜೆಪಿ ಟೀಕಿಸಿತ್ತು. ಡಾ ಮನಮೋಹನ್ ಸಿಂಗ್ ಸಾವಿನ ದುಃಖಾಚರಣೆ ನಡುವೆ ರಾಹುಲ್ ಪಾರ್ಟಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್ ಅವರು ವೈಯಕ್ತಿಕ ಪ್ರವಾಸಕ್ಕೆ ತೆರಳಿದರೆ ನಿಮಗೇನು ತೊಂದರೆ ಎಂದು ಕಿಡಿ ಕಾರಿತ್ತು.
ಇದೀಗ ಡಿಕೆ ಶಿವಕುಮಾರ್ ಕೂಡಾ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ತಮ್ಮ ಪತ್ನಿ, ಮಕ್ಕಳ ಸಮೇತ ಟರ್ಕಿ, ಕೆನಡಾ ಪ್ರವಾಸಕ್ಕೆ ಡಿಕೆಶಿ ತೆರಳಿದ್ದು, ಇಲ್ಲಿಯೇ ಹೊಸ ವರ್ಷವನ್ನು ಬರಮಾಡಿಕೊಳ್ಳಲಿದ್ದಾರೆ.