ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆಗೆ ಈಗ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಇದೀಗ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹೆಸರು ಕೇಳಿಬರುತ್ತಿದೆ.
ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಬಗ್ಗೆ ಯಾರಿಗೆ ಗೊತ್ತಿಲ್ಲ? ತಂದೆಯಂತೆ ಚಾರ್ಮಿಂಗ್, ನಾಯಕತ್ವದ ಗುಣವಿರುವ ಹೆಣ್ಣುಮಗಳು ಎಂದು ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಐಶ್ವರ್ಯಾರಲ್ಲಿ ನಾಯಕತ್ವದ ಗುಣ ರಕ್ತಗತವಾಗಿ ಬಂದಿದೆ.
ಕಾಫಿ ಡೇ ಸಿದ್ಧಾರ್ಥ್ ಅವರ ಪುತ್ರ ಅಮರ್ತ್ಯ ಅವರ ಪತ್ನಿಯೂ ಹೌದು. ಇತ್ತೀಚೆಗೆ ಡಿಕೆ ಶಿವಕುಮಾರ್ ಚನ್ನಪಟ್ಟಣದಿಂದ ತಾವೇ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಈಗ ಕೊನೆಯ ಕ್ಷಣದಲ್ಲಿ ತನ್ನ ಪುತ್ರಿಯನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಐಶ್ವರ್ಯಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರೂ ರಾಜಕೀಯದಲ್ಲಿ ಅಷ್ಟೊಂದು ಅನುಭವವಿಲ್ಲ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಪ್ಪ ಡಿಕೆ ಸುರೇಶ್ ಪರ ಪ್ರಚಾರ ನಡೆಸಿದ್ದರು. ಅದರ ಹೊರತಾಗಿ ರಾಜಕೀಯದಿಂದ ದೂರವೇ ಇದ್ದಾರೆ. ಲೋಕಸಭೆ ಚುನಾವಣೆ ವೇಳೆ ಮಾಧ್ಯಮಗಳು ನೀವು ರಾಜಕೀಯಕ್ಕೆಬರುತ್ತೀರಾ ಎಂದಾಗ ಇಲ್ಲವೆಂದೇ ಹೇಳಿದ್ದರು. ಆದರೆ ಈಗ ಡಿಕೆ ಶಿವಕುಮಾರ್ ಅವರೇ ಮಗಳನ್ನು ಚನ್ನಪಟ್ಟಣದಲ್ಲಿ ಕಣಕ್ಕಿಳಿಸುವ ಮೂಲಕ ರಾಜಕೀಯಕ್ಕೆ ಕರೆತರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.