ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಸಾರಿಗೆ ಬಸ್ ನೌಕರರು ಮುಷ್ಕರ ಆರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಪರಿಸ್ಥಿತಿಯನ್ನೂ ಸ್ವಲ್ಪ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾರಿಗೆ ನೌಕರರು ನಿನ್ನೆ ಸಭೆ ನಡೆಸಿದ್ದರು. ಆದರೆ ಸಭೆ ವಿಫಲವಾದ ಹಿನ್ನಲೆಯಲ್ಲಿ ಇಂದಿನಿಂದ ನೌಕರರು ಮುಷ್ಕರ ಆರಂಭಿಸಿದ್ದಾರೆ. ಹೀಗಾಗಿ ಬಸ್ ಗಳಿಲ್ಲದೇ ಜನರು ಪರದಾಡುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ನೌಕರರ ಬೇಡಿಕೆ ತಪ್ಪಲ್ಲ. ಆದರೆ ಸರ್ಕಾರದ ಪರಿಸ್ಥಿತಿಯನ್ನೂ ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು. ನಾಗರಿಕರ ಪರಿಸ್ಥಿತಿ ಬಗ್ಗೆಯೂ ಯೋಚನೆ ಮಾಡಬೇಕು. ಸಾರಿಗೆ ನೌಕರರು ಹಠ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಈಡೇರಿಸಲಾಗದ ಬೇಡಿಕೆಗಳನ್ನು ಈಡೇರಿಸಿ ಎಂದು ಹಠ ಮಾಡೋದು ಸರಿಯಲ್ಲ. ಕೆಲವು ನೌಕರರು ಕೆಲಸಕ್ಕೆ ಬಂದಿದ್ದಾರೆ. ಅವರಿಗೆ ಅಭಿನಂದನೆ ಎಂದಿದ್ದಾರೆ. ಇಂದು ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳ ಜೊತೆಗೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ್ದಾರೆ. ಆಗಸ್ಟ್ 10 ರಂದು ಈ ಮಾರ್ಗವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.