ದಾನ ಧರ್ಮ ಮಾಡುವ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಚೆಂದ: ಡಿಕೆ ಶಿವಕುಮಾರ್

Krishnaveni K

ಶುಕ್ರವಾರ, 29 ಆಗಸ್ಟ್ 2025 (18:58 IST)
ಬೆಂಗಳೂರು: ಕಮಲ ಕೆಸರಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ ದಾನ ಧರ್ಮ ಮಾಡುವ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಚೆಂದ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರ ಹೇಳಿಕೆಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ಬಂದಿದೆ.

ಇಂದು ಮಾಗಡಿಯಲ್ಲಿ ಜೆಡಿಎಸ್ ತೊರೆದು ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಡಿಕೆ ಶಿವಕುಮಾರ್ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಈ ವೇಳೆ ಅವರು ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ,
ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಜನಪರ ಆಡಳಿತ ಹಾಗೂ ಆರ್ಥಿಕ ಸಬಲೀಕರಣಕ್ಕೆ ನೆರವಾಗಿರುವ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿ ಜೆಡಿಎಸ್‌ ತೊರೆದು ಹಲವು ಮುಖಂಡರು, ಕಾರ್ಯಕರ್ತರು ಇಂದು ಮಾಗಡಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಕೆಪಿಸಿಸಿ ಅಧ್ಯಕ್ಷನಾಗಿ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡೆ. ಕಾಂಗ್ರೆಸ್‌ ಶಕ್ತಿ - ದೇಶದ ಶಕ್ತಿ! ಎಂದಿದ್ದಾರೆ.

ಅವರ ಈ ಹೇಳಿಕೆಗೆ ನೆಟ್ಟಿಗರೂ ಅಷ್ಟೇ ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸಿದ್ದಾರೆ. ದೇವಸ್ಥಾನಗಳು ಹಿಂದೂಗಳ ಸುಪರ್ದಿಯಲ್ಲಿದ್ದರೇ ಚೆಂದ ಎಂದು ಒಬ್ಬರು ಟಾಂಗ್ ಕೊಟ್ಟಿದ್ದಾರೆ. ಇನ್ನೊಬ್ಬರು ದಾನ ಧರ್ಮ ಮಾಡಕ್ಕೆ ನಮ್ಮ ತೆರಿಗೆ ಹಣವೇ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಮೊದಲು ಅಭಿವೃದ್ಧಿ ಮಾಡಿ ಎಂದು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ