ಬೆಂಗಳೂರು: ದೇವರ ಅನುಗ್ರಹದಿಂದ ರಾಜ್ಯದಲ್ಲಿ ಚೆನ್ನಾಗಿ ಮಳೆ ಆಗ್ತಿದೆ, ಕೆಆರ್ ಎಸ್ ಜಲಾಶಯ ಇನ್ನೇನು ಭರ್ತಿಯಾಗ್ತಿದೆ. ಹೀಗಾಗಿ ಕೋರ್ಟ್ ಹೇಳಿದ ಹಾಗೆ ತಮಿಳುನಾಡಿಗೆ ನೀರು ಬಿಡಬಹುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯ ಭಾರತ್ ಝೋಡೋ ಭವನದಲ್ಲಿ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ರಾಜ್ಯದಲ್ಲಿ ಮಳೆಯಾಗುತ್ತಿದೆ. ನಿಮಗೆಲ್ಲಾ ಗೊತ್ತಿರೋ ಹಾಗೆ ಕೆಆರ್ ಎಸ್ ಭರ್ತಿಯಾಗ್ತಿದೆ. ಹೀಗಾಗಿ ತಮಿಳುನಾಡಿಗೆ ಬಿಡಬೇಕಾದ ನೀರು ಬಿಡಲು ತೊಂದರೆಯಾಗದು ಎಂದುಕೊಳ್ತೀವಿ ಎಂದಿದ್ದಾರೆ.
ನಾವೀಗ ಕೆಲವು ಕಡೆ ನೀರು ಬಿಡಲೇಬೇಕಾಗುತ್ತದೆ. ಹೀಗಾಗಿ ಮುಂಜಾಗ್ರತವಾಗಿ ಹೆಚ್ಚು ಕಡಿಮೆ ಆಗಬಾರದು ಎಂದು ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ನಿಲ್ಲಿಸಿದ್ದೇವೆ. ಡ್ಯಾಮ್ ಅಕ್ಕಪಕ್ಕ ಇರುವ ಮನೆಗಳಿಗೆ ಎಚ್ಚರಿಕೆಯಿಂದಿರುವಂತೆ ಹೇಳಿದ್ದೇವೆ ಎಂದಿದ್ದಾರೆ.
ನಮ್ಮ ರೈತರ ಹಿತಕ್ಕೆ ಏನೆಲ್ಲಾ ಬೇಕು, ಕೆರೆಗಳನ್ನು ತುಂಬಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಚಾನೆಲ್ ಗಳನ್ನು ಬಿಡುತ್ತಿದ್ದೇವೆ. ಕೃಷಿ ಇಲಾಖೆಯೊಂದಿಗೆ ಮಾತನಾಡಿದ್ದೇವೆ. ರೈತರಿಗೆ ಅನುಕೂಲವಾಗುವ ಹಾಗೆ ಎಲ್ಲಾ ಕೆಲಸ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ.