ಬೆಂಗಳೂರು: ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಈಗಾಗಲೇ ನೆರೆ ಸದೃಶ ವಾತಾವರಣವುಂಟಾಗಿದೆ. ಹಲವೆಡೆ ಭೂ ಕುಸಿತ, ರಸ್ತೆ ಬಂದ್ ಆಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಸತತ ಮಳೆಯಿಂದ ಕರಾವಳಿ, ಮಲೆನಾಡಿನ ಜನ ಈಗ ಬೇಸತ್ತಿದ್ದಾರೆ. ಅತ್ತ ಮನೆಯಲ್ಲಿ ಕೂರಲೂ ಆಗದೇ ಹೊರಗಡೆ ಓಡಾಡಲೂ ಆಗದ ಪರಿಸ್ಥಿತಿಯಾಗಿದೆ. ಈ ನಡುವೆ ಹವಾಮಾನ ಇಲಾಖೆ ಲೇಟೆಸ್ಟ್ ವರದಿ ಪ್ರಕಾರ ಮಳೆ ಮತ್ತಷ್ಟು ಮುಂದುವರಿಯಲಿದೆ ಎನ್ನಲಾಗಿದೆ.
ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಜುಲೈ 24 ರವರೆಗೆ ಮಳೆ ಅಬ್ಬರ ಮುಂದುವರಿಯಲಿದೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಮಳೆ ಕೊಂಚ ತಗ್ಗಿದ್ದರೂ ಮತ್ತೆ ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಹಾಗಿದೆ. ಜುಲೈ 24 ರವರೆಗೆ ಮಳೆಯ ಅಬ್ಬರವಿರಲಿದ್ದು, ಕ್ರಮೇಣ ಕೊಂಚ ಮಳೆ ಕಡಿಮೆಯಾಗಬಹುದು ಎಂದು ಹವಾಮಾನ ವರದಿ ತಿಳಿಸಿದೆ.
ಕೇವಲ ಕರಾವಳಿ ಮಾತ್ರವಲ್ಲದೆ, ಮೈಸೂರು, ಮಂಡ್ಯ, ಹಾಸನ ಮುಂತಾದೆಡೆಯೂ ಉತ್ತಮ ಮಳೆಯಾಗುತ್ತಿದೆ. ಈಗಾಗಲೇ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗುತ್ತಿವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗೆ ಇಂದೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಸನ, ಬೆಳಗಾವಿಯಲ್ಲಿ ಆರೆಂಜ್ ಅಲರ್ಟ್, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲೂ ನಿನ್ನೆಯಿಡೀ ಮಳೆಯಾಗಿದ್ದು, ಇಂದೂ ಮೋಡ ಕವಿದ ವಾತಾವರಣವಿದೆ.