ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಸೋಷಿಯಲ್ ಮೀಡಿಯಾದಲ್ಲೂ ವಾರ್ ಜೋರಾಗಿ ನಡೆದಿದೆ.
ಇತ್ತೀಚೆಗೆ ಕಾಂಗ್ರೆಸ್ ಕೇಂದ್ರದ ಮೋದಿ ಸರ್ಕಾರ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಚೊಂಬು ಅಭಿಯಾನ ಆರಂಭಿಸಿತ್ತು. ಇದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್ ವಿರುದ್ಧ ಚಿಪ್ಪು ಮತ್ತು ಪಿಕ್ ಪಾಕೆಟ್ ಅಭಿಯಾನ ಆರಂಭಿಸಿದೆ. ಜನರಿಗೆ ಗ್ಯಾರಂಟಿ ಭರವಸೆ ನೀಡಿ ಕೊನೆಗೆ ರಾಜ್ಯ ಸರ್ಕಾರ ಕೈಗೆ ಚಿಪ್ಪು ನೀಡಿದೆ, ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಜನರ ಜೇಬಿಗೇ ಕೈ ಹಾಕಿ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ತಿರುಗೇಟು ಕೊಟ್ಟಿತ್ತು.
ಇದೀಗ ಬಿಜೆಪಿಯ ಚಿಪ್ಪು ಮತ್ತು ಪಿಕ್ ಪಾಕೆಟ್ ಅಭಿಯಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಮ್ಮ ಚೊಂಬು ಜಾಹೀರಾತು ನೋಡಿ ಸಹಿಸಲಾಗದೇ ಬಿಜೆಪಿಯವರು ಪಿಕ್ ಪಾಕೆಟ್ ಅಭಿಯಾನ ಶುರು ಮಾಡಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾವು ಪಿಕ್ ಪಾಕೆಟ್ ಮಾಡಿದ್ದೇವೆ ಎಂದು ಬಿಜೆಪಿಯವರು ಜಾಹೀರಾತು ಹಾಕಿದ್ದಾರೆ. ಬಿಜೆಪಿಯವರು ಪಿಕ್ ಪಾಕೆಟ್ ಮಾಡಿ ನಮ್ಮ ಮೇಲೆ ಹಾಕುತ್ತಿದ್ದಾರೆ. ಬಿಜೆಪಿಯವರಿಗೆ ಚೊಂಬು ಅಭಿಯಾನವನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಬರ ಪರಿಹಾರ ನೀಡುತ್ತೇವೆ ಎಂದು ಕೇಂದ್ರ ಹೇಳಿದೆ, ನಮಗೆ ಪರಿಹಾರ ಸಿಗುತ್ತೆ. ಈಗ ಸಾಂಕೇತಿಕವಾಗಿ ಹೋರಾಟ ಮುಂದುವರಿಸಿದ್ದೇವೆ ಎಂದಿದ್ದಾರೆ.