ಬೆಂಗಳೂರು : ಸ್ಪಂದಿಸುವುದು ನಿಮ್ಮ ಕರ್ತವ್ಯ. ಎಷ್ಟು ಸಾಧ್ಯವೋ ಅಷ್ಟು ಪಕ್ಷದ ಶಾಸಕರ ಕೆಲಸ ಮಾಡಿಕೊಡಿ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದ ಸದಸ್ಯರಿಗೆ ಹೇಳಿದ್ದಾರೆ.
ಗುರುವಾರ ನಡೆದ ಸಂಪುಟ ಸಭೆ ಬಳಿಕ ನಡೆದ ಅನೌಪಚಾರಿಕ ಸಭೆಯಲ್ಲಿ ಪತ್ರದ ಬಗ್ಗೆ ವಿಸ್ತ್ರತ ಚರ್ಚೆ ನಡೆದಿದೆ. ಈ ವಿಚಾರದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರು ಬಹಿರಂಗವಾಗಿ ಪತ್ರ ಬರೆಯಬಾರದಿತ್ತು. ಬರೆದಿದ್ದು ತಪ್ಪು. ಇನ್ನು ಮುಂದೆ ಹಾಗೆ ನಡೆದುಕೊಳ್ಳದಂತೆ ಸೂಚನೆ ನೀಡುತ್ತೇನೆ. ಆದರೆ ಶಾಸಕರುಗಳಿಗೆ ಸಾಕಷ್ಟು ನಿರೀಕ್ಷೆ ಇದೆ ಅದು ತಪ್ಪಲ್ಲ. ಅವರಿಂದಲೇ ನಾನು ಮುಖ್ಯಮಂತ್ರಿ ಆಗಿ ನೀವು ಸಚಿವರಾಗಿದ್ದೀರಿ. ಅವರಿಗೆ ಸ್ಪಂದಿಸುವುದು ನಿಮ್ಮ ಕರ್ತವ್ಯ. ಎಷ್ಟು ಸಾಧ್ಯವೋ ಅಷ್ಟು ಪಕ್ಷದ ಶಾಸಕರ ಕೆಲಸ ಮಾಡಿಕೊಡಿ. ಕೆಲಸ ಆಗದಿದ್ದರೆ ಮನವರಿಕೆ ಮಾಡಿಕೊಡಿ ಎಂದು ಸಿಎಂ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ಹೆಚ್ಚು ಅನುದಾನ ಇಲ್ಲ ಎನ್ನುವುದನ್ನು ಎಲ್ಲಾ ಶಾಸಕರಿಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡುತ್ತೇನೆ. ಜಿಲ್ಲಾ ಸಚಿವರುಗಳೇ ಆಯಾ ಜಿಲ್ಲೆಗಳ ಸಮಸ್ಯೆ ಬಗೆಹರಿಸಿದರೆ ಅರ್ಧ ಸಮಸ್ಯೆಯೇ ಬಗೆ ಹರಿಯಲಿದೆ ಎಂದು ಸೂಕ್ಷ್ಮವಾಗಿ ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.