ಖಾಸಗಿ ಲ್ಯಾಬ್ ನಲ್ಲಿ ಕೊರೋನಾ ಪರೀಕ್ಷಿಸುವಾಗ ಈ ಸಂಖ್ಯೆ ಪಡೆಯಲು ಮರೆಯದಿರಿ

ಮಂಗಳವಾರ, 20 ಏಪ್ರಿಲ್ 2021 (09:01 IST)
ಬೆಂಗಳೂರು: ಇತ್ತೀಚೆಗೆ ಕೊರೋನಾ ಹಾವಳಿ ಜೋರಾಗಿದೆ. ಜನ ಸಾಮಾನ್ಯರು ತಮ್ಮ ಹತ್ತಿರದ ಯಾವುದೇ ಪ್ರಯೋಗಾಲಯಕ್ಕೆ ತೆರಳಿ ಕೊರೋನಾ ವರದಿ ಪಡೆಯುವುದು ಸಹಜ. ಆದರೆ ಹೀಗೆ ಮಾಡುವಾಗ ಇದೊಂದನ್ನು ಮರೆಯಬೇಡಿ.


ಎಲ್ಲರೂ ಸರ್ಕಾರೀ ಲ್ಯಾಬ್ ಗಳಲ್ಲೇ ಕೊರೋನಾ ಪರೀಕ್ಷೆ ಮಾಡಬೇಕೆಂದಿಲ್ಲ. ಸುಲಭವಾಗಿ ಹಾಗೂ ತ್ವರಿತವಾಗಿ ವರದಿ ಕೈ ಸೇರುತ್ತದೆಂದು ಎಷ್ಟೋ ಮಂದಿ ಖಾಸಗಿ ಲ್ಯಾಬ್ ಗಳಲ್ಲೇ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.

ಆದರೆ ಹೀಗೆ ಮಾಡಿದಾಗ ಪ್ರಯೋಗಾಲಯದಿಂದ ವರದಿ ಜೊತೆಗೆ ಸರ್ಕಾರ ನೀಡುವ ‘ಬಿಯು’ ನಂಬರ್ ಪಡೆಯಲು ಮರೆಯದಿರಿ. ನೀವು ಸರ್ಕಾರೀ ಸೌಲಭ್ಯಗಳನ್ನು ಪಡೆಯಬೇಕಾದರೆ, ಸರ್ಕಾರೀ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೊಳಗಾಗಬೇಕಾದರೆ ಈ ಸಂಖ್ಯೆ ಬೇಕೇ ಬೇಕು.

ಆದರೆ ಕೆಲವೊಂದು ಖಾಸಗಿ ಲ್ಯಾಬ್ ಗಳು ನೀವು ಟ್ರಾವೆಲ್ ಉದ್ದೇಶಕ್ಕಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದಾದರೆ ‘ಬಿಯು’ ನಂಬರ್ ಕೊಡದೇ ವಂಚಿಸುತ್ತವೆ. ಅವರು ನಿಮ್ಮ ಪರೀಕ್ಷಾ ವರದಿಯನ್ನು ಐಸಿಎಂಆರ್ ಪೋರ್ಟಲ್ ಗೆ ಅಪ್ ಲೋಡ್ ಮಾಡಿ ಬಿಯು ಸಂಖ್ಯೆ ನೀಡದೇ ಹೋದಲ್ಲಿ ನಿಮಗೆ ಸರ್ಕಾರೀ ಸೌಲಭ್ಯ ಸಿಗದು. ಕೊನೆಯ ಕ್ಷಣದಲ್ಲಿ ಈ ಸಂಖ್ಯೆ ಸಿಗುವುದೂ ಕಷ್ಟ. ಇದರಿಂದಾಗಿ ನಿಮಗೆ ಸರ್ಕಾರೀ ಸೌಲಭ್ಯ ಪಡೆಯಲು ಕಷ್ಟವಾಗಬಹುದು. ಹೀಗಾಗಿ ಖಾಸಗಿ ಪ್ರಯೋಗಾಲಯದಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವ ಮೊದಲು ಬಿಯು ಸಂಖ್ಯೆ ನೀಡುತ್ತಾರೆಯೇ ಎಂದು ಖಚಿತಪಡಿಸಿಕೊಂಡೇ ಪರೀಕ್ಷೆಗೊಳಗಾಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ