ಬೆಂಗಳೂರು: ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸದರಾಗಿರುವ ಡಾ ಸಿಎನ್ ಮಂಜುನಾಥ್ ಅಪಘಾತಗೊಂಡವರಿಗೆ ಸ್ಥಳದಲ್ಲೇ ನೆರವು ನೀಡಿ ಎಲ್ಲರ ಮನಗೆದ್ದಿದ್ದಾರೆ.
ರಾಮನಗರದ ಸಾತನೂರು-ಕನಕಪುರ ಮಾರ್ಗದ ಮಧ್ಯೆ ಡಾ ಸಿಎನ್ ಮಂಜುನಾಥ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ನಡೆದಿದ್ದು ಅವರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಕಾರು ನಿಲ್ಲಿಸಿದ ಡಾ ಮಂಜುನಾಥ್ ಸ್ಥಳದಲ್ಲೇ ಗಾಯಗೊಂಡವರನ್ನು ಪರೀಕ್ಷಿಸಿದ್ದಾರೆ. ಬಳಿಕ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದೇ ಅವರು ಗಾಯಾಗಳುಗಳನ್ನು ಮತ್ತೊಂದು ವಾಹನದಲ್ಲಿ ಕೂರಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಸ್ಪತ್ರೆಗೆ ಕರೆ ಮಾಡಿ ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಲಹೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಆ ಆಸ್ಪತ್ರೆಗೆ ಭೇಟಿ ನೀಡಿ ತಾವೇ ಗಾಯಾಳುಗಳನ್ನು ಪರೀಕ್ಷಿಸಿದ್ದಾರೆ.
ಸಂಸದರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವೈದ್ಯ ಎನಿಸಿಕೊಂಡ ಮೇಲೆ ಅವರಿಗೆ ನಿವೃತ್ತಿ ಎಂಬುದೇ ಇಲ್ಲ ಎಂದು ನಿರೂಪಿಸಿದ್ದಾರೆ. ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಡಾ ಸಿಎನ್ ಮಂಜುನಾಥ್ ಅನೇಕ ಬಡ ರೋಗಿಗಳಿಗೆ ನೆರವಾಗಿದ್ದರು. ಇದೀಗ ವೈದ್ಯ ವೃತ್ತಿಯಿಂದ ನಿವೃತ್ತಿ ಪಡೆದು ಸಂಸದರಾದ ಮೇಲೆ ತಮ್ಮ ಜನಸೇವೆ ಮುಂದುವರಿಸಿದ್ದಾರೆ.