ಪೆಟ್ರೋಲ್, ಡೀಸೆಲ್ ಆಯ್ತು, ಈಗ ಬೆಂಗಳೂರಿನಲ್ಲಿ ನೀರಿನ ಬೆಲೆ ಏರಿಕೆಗೂ ರೆಡಿಯಾಗಿ
ಕಳೆದ 10 ವರ್ಷಗಳಿಂದ ನೀರಿನ ದರ ಪರಿಷ್ಕರಣೆಯಾಗಿಲ್ಲ. ಇದೀಗ ಬೆಂಗಳೂರಿನಲ್ಲಿ ಜಲಮಂಡಳಿಯ ನೀರಿನ ದರ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಜಲಮಂಡಳಿ ಈಗಾಗಲೇ ದರ ಏರಿಕೆಗೆ ಸರ್ಕಾರದ ಮುಂದೆ ಪ್ರಸ್ತಾವನೆ ಮುಂದಿಟ್ಟಿದೆ. ಸದ್ಯದಲ್ಲೇ ದರ ಏರಿಕೆಯಾಗುವ ಎಲ್ಲಾ ಸಾಧ್ಯತೆಯಿದೆ.
ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸರ್ಕಾರ ನೀರಿನ ದರ ಏರಿಕೆ ಬಗ್ಗೆ ಸುಳಿವು ನೀಡಿತ್ತು. ಆದರೆ ಅದಾದ ಬಳಿಕ ಬೆಂಗಳೂರಿನಲ್ಲಿ ನೀರಿನ ಅಭಾವ ಎದುರಾಗಿತ್ತು. ಬಳಿಕ ಲೋಕಸಭೆ ಚುನಾವಣೆ ಎದುರಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ದರ ಏರಿಕೆ ಮಾಡುವ ಗೋಜಿಗೆ ಹೋಗಿರಲಿಲ್ಲ.
ಆದರೆ ಈಗ ಮಳೆಯಾಗಿದ್ದು, ಚುನಾವಣೆಯೂ ಮುಗಿದಿದೆ. ಇತ್ತ ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸಲು ಸರ್ಕಾರ ಹೆಣಗಾಡುತ್ತಿದೆ. ಇದರ ನಡುವೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಜನರಿಗೆ ಬಿಸಿ ಮುಟ್ಟಿಸಿದೆ. ಇದರ ನಡುವೆ ಈಗ ನೀರಿನ ದರವೂ ಏರಿಕೆಯಾದರೆ ಜನರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಲಿದೆ.