ಡಾ.ಪುನೀತ್‌ ರಾಜಕುಮಾರ್‌ ಹೃದಯಜ್ಯೋತಿ ಯೋಜನೆಗೆ ಚಾಲನೆ ನೀಡಿದ ದಿನೇಶ್ ಗುಂಡೂರಾವ್

Sampriya

ಶುಕ್ರವಾರ, 15 ಮಾರ್ಚ್ 2024 (17:12 IST)
Photo Courtesy Whatsapp
Photo Courtesy Whatsapp
ಬೆಂಗಳೂರು: ಹಠಾತ್ ಹೃದಯಾಘಾತಕ್ಕೆ ತುರ್ತಾಗಿ ಚಿಕಿತ್ಸೆ ನೀಡುವ  'ಕರ್ನಾಟಕ ರತ್ನ ಡಾ.ಪುನೀತ್‌ ರಾಜಕುಮಾರ್‌ ಹೃದಯಜ್ಯೋತಿ' ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದರು.
 
ಆರೋಗ್ಯ ಇಲಾಖೆ ವತಿಯಿಂದ ಸತ್ತೂರಿನ ಡಾ.ಡಿ.ವೀರೇಂದ್ರ ಹಗ್ಗಡೆ ಕಲಾ ಕ್ಷೇತ್ರ ಭವನದಲ್ಲಿ ಶುಕ್ರವಾರ ಆಯೋಜಿಸಲಾಯಿತು. 
 
ಈ ವೇಳೆ ಮಾತನಾಡಿದ ಅವರು, ಹೃದಯಾಘಾತ ಸಂಭವಿಸಿದಾಗ ಸಮುದಾಯ, ತಾಲ್ಲೂಕು ಆಸ್ಪತ್ರೆಗಳಲ್ಲಿ ಇಸಿಜಿ ಮಾಡಿ ತಕ್ಷಣವೇ ಕೃತಕ ಬುದ್ಧಿಮತೆ (ಎಐ) ಮೂಲಕ ಆಘಾತದ ತೀವ್ರತೆ ಪತ್ತೆಯನ್ನು ಹಚ್ಚುವ ನಿಟ್ಟಿನಲ್ಲಿ ಕಿಟ್‌ಗಳನ್ನು ಒದಗಿಸಲಾಗಿದೆ. ಫೋನ್‌ನ ಮೂಲಕ ಆಸ್ಪತ್ರೆಯ ವೈದ್ಯರು ತಜ್ಞರನ್ನು ತಂತ್ರಾಂಶ ಮೂಲಕ ಆಘಾತ ಪ್ರಮಾಣ ಪತ್ತೆ ಹಚ್ಚುತ್ತಾರೆ. ಆರು ನಿಮಿಷದಲ್ಲಿ ಈ ಪ್ರಕ್ರಿಯೆ ನಡೆಸುತ್ತಾರೆ ಎಂದು ವಿವರಿಸಿದರು. 
 
ಆಘಾತ ತೀವ್ರ ಪ್ರಮಾಣದಲ್ಲಿ ಆಗಿದ್ದರೆ ತಜ್ಞರ ಸಲಹೆ ಪಡೆದು ವೈದ್ಯರು ತಕ್ಷಣವೇ 'ಟೆನೆಕ್ಟ್‌ಪಾಲ್ಸ್‌' ಚುಚ್ಚುಮದ್ದು ನೀಡುತ್ತಾರೆ. ಹೃದಯದಲ್ಲಿ 'ಬ್ಲಾಕ್‌' ಆಗುವುದನ್ನು ಚುಚ್ಚುಮದ್ದು ತಡೆಯುತ್ತದೆ. ಹೃದಯಾಘಾತವಾದಾಗ ಸುವರ್ಣ ಅವಧಿಯಲ್ಲಿ (ಗೋಲ್ಡನ್‌ ಹವರ್‌) ಚಿಕಿತ್ಸೆ ನೀಡಿ ಜೀವ ಉಳಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು. 
 
15 ಜಿಲ್ಲೆಗಳ 71 ತಾಲ್ಲೂಕು ಆಸ್ಪತ್ರೆಗಳಿಗೆ ಈ ಯೋಜನೆ ಲಿಂಕ್‌ ಮಾಡಲಾಗಿದೆ. ಈ 71 ಆಸ್ಪತ್ರೆಗಳಿಗೆ ಚುಚ್ಚುಮದ್ದುಗಳನ್ನು ಆಸ್ಪತ್ರೆಗೆ ಪೂರೈಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು ಎಂದು ಹೇಳಿದರು.
 
ಪುನೀತ್‌ ರಾಜಕುಮಾರ್‌ ಅವರು ನಟ ಮಾತ್ರವಲ್ಲ ಮನುಷ್ಯತ್ವಕ್ಕೆ ಹೆಸರಾದವರು. ಯೋಜನೆಯನ್ನು ಅರ್ಥಪೂರ್ಣವಾಗಿಸಲು ಇದಕ್ಕೆ ಅವರ ಹೆಸರು ನಾಮಕರಣ ಮಾಡಲಾಗಿದೆ ಎಂದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ