ಗ್ರಾಮ ಒನ್ ಯೋಜನೆಗೆ ಮೂರ್ನಾಡು ಗ್ರಾಮದಲ್ಲಿ ಚಾಲನೆ

ಶುಕ್ರವಾರ, 28 ಜನವರಿ 2022 (15:02 IST)
ಗ್ರಾಮ ಒನ್ ಯೋಜನೆಯು ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ನಾಗರಿಕ ಸ್ನೇಹಿ ಯೋಜನೆಯಾಗಿರುವ ‘ಗ್ರಾಮ ಒನ್’ ಯೋಜನೆಗೆ ಕೊಡಗು ಜಿಲ್ಲೆ ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಗ್ರಾಮ ಒನ್ ಯೋಜನೆ’ಗೆ ವರ್ಚುವಲ್ ಮೂಲಕ ಬುಧವಾರ ಚಾಲನೆ ನೀಡಿದರು.
ಗ್ರಾಮೀಣ ಜನರಿಗೆ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಸೇವೆಗಳನ್ನು ಅವರ ಸ್ವಂತ ಗ್ರಾಮದಲ್ಲಿ ತಲುಪಿಸುವ ಗುರಿಯನ್ನು ಈ ಯೋಜನೆ ಹೊಂದಿದ್ದು, ಆ ದಿಸೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಟ ಒಂದು ‘ಗ್ರಾಮ ಒನ್’ ಕೇಂದ್ರ ಸ್ಥಾಪಿಸಲಾಗುತ್ತಿದೆ.
 
ಅದರಂತೆ ಕೊಡಗಿ‌ನ ಮೂರ್ನಾಡು ಗ್ರಾಮ ಪಂಚಾಯತ್’ನಲ್ಲಿ ಜಿಲ್ಲೆಯ ಪ್ರಥಮ ಗ್ರಾಮ ಒನ್ ಕೇಂದ್ರಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮತ್ತಿತರರು ಕಾಂತೂರು-ಮೂರ್ನಾಡು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು, ಗ್ರಾ,ಪಂ ಮಟ್ಟದಲ್ಲಿ ಗ್ರಾಮ ಒನ್ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ. ಗ್ರಾಮ ಒನ್ ಮೂಲಕ ಗ್ರಾಮೀಣ ಸೇವೆಗಳು ಲಭ್ಯವಾಗಲಿವೆ ಎಂದರು.
ಗ್ರಾಮ ಒನ್ ಯೋಜನೆಯ ಮೂಲಕ ನಾಗರಿಕರ ಮನೆ ಬಳಿಯೇ ಸೇವಾ ಸಿಂಧೂ ವೇದಿಕೆಯ ಮೂಲಕ 100 ಕ್ಕೂ ಹೆಚ್ಚು ಸೇವೆಗಳು ಲಭ್ಯವಾಗಲಿವೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಮತ್ತಿತರರು ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ