ಸಕ್ಕರೆ ನಾಡಿನ ಬೆಳೆಗೆ ನೀರಿನ ಬರ!

ಶನಿವಾರ, 26 ಜನವರಿ 2019 (16:15 IST)
ಮಂಡ್ಯ ಜಿಲ್ಲೆಯ ಕೆ ಆರ್ ಎಸ್   ಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ, ನೀರನ್ನು ಕೊಡುವ ಅಧಿಕಾರ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಕೈಗೆ ಸಿಲುಕಿರುವುದರಿಂದ ಬೇಸಿಗೆ ಬೆಳೆಗಳಿಗೆ ನೀರು ಸಿಗುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ರೈತರು ಬೇಸಿಗೆ ಬೆಳೆಗೆ ನೀರು ಸಿಗುವುದೇ ಎಂದು ಕರೆ ಮಾಡಿದ ಹಿನ್ನೆಲೆಯಲ್ಲಿ ನೀರಾವರಿ ನಿಗಮದ ಅಧೀಕ್ಷಕ ರಮೇಂದ್ರ ಬಿತ್ತನೆ ಮಾಡುವ ಬೆಳೆಗಳಿಗೆ ನೀರು ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಹಾಲಿ ಬೆಳೆದು ನಿಂತಿರುವ ಬೆಳೆಗಳ ಅಂಕಿ ಅಂಶ ಸಿದ್ದಪಡಿಸುತ್ತಿದ್ದು, ಆ ಬೆಳೆಗಳ ರಕ್ಷಣೆಗೆ ಯಾವ ರೀತಿ ನೀರು ಕೊಡಬೇಕೆಂಬುದರ ಬಗ್ಗೆ 2-3 ದಿನದಲ್ಲಿ ತೀರ್ಮಾನ ತೆಗೆದುಕೊಂಡು ಪ್ರಕಟಿಸಲಾಗುವುದು ಎಂದವರು ಹೇಳಿದ್ದಾರೆ.

ಸದ್ಯ ರಾಜ್ಯದ ಪಾಲಿನ ನೀರು 6 ಟಿಎಂಸಿ ಉಳಿದಿದ್ದರೆ, ಒಟ್ಟಾರೆ 25 ಟಿಎಂಸಿ ನೀರು ಬಳಕೆಗೆ ಸಿಗಲಿದೆ. ಆದರೆ 25 ಟಿಎಂಸಿ ನೀರನ್ನು ಹಂಚಿಕೆ ಮಾಡುವ ಅಧಿಕಾರ ನೀರು ನಿರ್ವಹಣಾ ಮಂಡಳಿಯ ಕೈಯಲ್ಲಿದ್ದು, ಮಂಡಳಿ ಬೆಳೆಗಳಿಗೆ ನೀರು ಬಿಡುವುದೋ ಅಥವಾ ಬೇಸಿಗೆಗೆ ಕುಡಿಯುವ ನೀರಿಗಾಗಿ ಸಂಗ್ರಹಿಸಿಟ್ಟುಕೊಳ್ಳುವುದೋ ಎಂಬುದು ಬಹಿರಂಗ ಆಗಬೇಕಿರುವ ಗುಟ್ಟು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ