ಬಾಗಲಕೋಟೆ ನಗರದ ಹರಣಸಿಕಾರಿ ಕಾಲೋನಿಯ ದಂಡಿನ ದುರ್ಗಾದೇವಿ ಜಾತ್ರೆ ಅಂದರೆ ತೆಂಗಿನಕಾಯಿ ಪವಾಡಕ್ಕೆ ಹೆಸರಾದ ಜಾತ್ರೆ. ಇಲ್ಲಿ ಸ್ವತಃ ದುರ್ಗಾದೇವಿ ಪೂಜಾರಿಗಳು ತಲೆಗೆ ತೆಂಗಿನಕಾಯಿ ಒಡೆದುಕೊಂಡು ತೆಂಗಿನಕಾಯಿ ಒಡೆಯುವ ಮೂಲಕ ಪವಾಡ ಮೆರೆಯುತ್ತಾರೆ. ತಲೆಯಿಂದ ತೆಂಗಿನಕಾಯಿ ಒಡೆದು ಬೀಸಾಕಿದ್ರೂ ಆ ಪೂಜಾರಿಗಳಿಗೆ ಮಾತ್ರ ಯಾವುದೇ ಗಾಯ ಆಗಲ್ಲ. ಹರಶಿಕಾರಿ ಜನಾಂಗದಲ್ಲಿ ತಲೆತಲಾಂತರದಿಂದ ಈ ಪದ್ದತಿ ನಡೆದುಕೊಂಡು ಬಂದಿದ್ದು, ಬಾಗಲಕೋಟೆ ನಗರದಲ್ಲಿ ಕಳೆದ 40 ವರ್ಷಗಳಿಂದ ತೆಂಗಿನಕಾಯಿ ಪವಾಡ ನಡೆಯುತ್ತಿದೆ, ಇಂದಿಗೂ ಮುಂದುವರೆಯುತ್ತಿದೆ. ಅಂದು ಕಾಣಿಸಿಕೊಳ್ಳುತ್ತಿದ್ದ ಸಾಂಕ್ರಾಮಿಕ ರೋಗ ತಡೆಯೋದಕ್ಕೆ ಅಂತ ಶುರುವಾದ ತೆಂಗಿನಕಾಯಿ ಪವಾಡ ಇಂದಿಗೂ ನಡೆಯುತ್ತಿದೆ. ದೇವಿಯ ಇಬ್ಬರು ಪೂಜಾರಿಗಳು ಎರಡು ಪ್ರತ್ಯೇಕ ಸ್ಥಳದಲ್ಲಿ ತೆಂಗಿನಕಾಯಿಗಳನ್ನು ತಲೆಗೆ ಒಡೆಯುವ ಪವಾಡ ಮಾಡುತ್ತಾರೆ. ಇನ್ನು ಇದರ ಜೊತೆಗೆ ಭಕ್ತರು ತಮ್ಮ ವಿವಿಧ ಹರಕೆ ತೀರಿಸೋದಕ್ಕೆ ದೀಡ ನಮಸ್ಕಾರ ವಿಶೇಷ ಪೂಜೆ ಪುನಸ್ಕಾರ ಮಾಡುತ್ತಾರೆ. ಇಲ್ಲಿ ದಂಡಿನ ದುರ್ಗಾದೇವಿ ಜಾತ್ರೆ ಹರಣಶಿಕಾರಿ ಜನರೆಲ್ಲರನ್ನು ಒಗ್ಗೂಡಿಸುವ ಜಾತ್ರೆ.ಈ ಜಾತ್ರೆಗೆ ಅವರ ಮನೆ ಮಂದಿ ಎಲ್ಲೇ ಇದ್ದರೂ ಸ್ಥಳಕ್ಕೆ ಬಂದು ಜಾತ್ರೆಯಲ್ಲಿ ಭಾಗಿಯಾಗಿ ಸಂಭ್ರಮಿಸುತ್ತಾರೆ.