ಸೈಯದ್ ಇಸಾಕ್ ಗೆ ಸನ್ಮಾನಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಮಂಗಳವಾರ, 31 ಆಗಸ್ಟ್ 2021 (20:51 IST)
ಬೆಂಗಳೂರು: ಕನ್ನಡದ ಮೇಲಿನ ಅಭಿಮಾನದ ಕಾರಣಕ್ಕಾಗಿ ಒಂದು ಗ್ರಂಥಾಲಯವನ್ನು ನಡೆಸುತ್ತಿದ್ದ ಮೈಸೂರಿನ ಸೈಯದ್ ಇಸಾಕ್ ಸನ್ಮಾನಿಸಿರುವುದು ಅವಿಸ್ಮರಣೀಯ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದರು.  
 
ನಗರದ ವಿಜಯನಗರದ ಜ್ಞಾನಯೋಗ ಮಂದಿರದಲ್ಲಿ ಕರ್ನಾಟಕ ಪ್ರಕಾಶನ ಸಂಘವು ಎಂ.ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ ಹಾಗೂ ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ ಪ್ರಧಾನ ಸಮಾರಂಭ ಸೋಮವಾರ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಎಂ.ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ಸೈಯ್ಯದ್ ಇಸಾಕ್ , ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿಯನ್ನು ಆರ್. ಪೂರ್ಣಿಮಾ ಸ್ವೀಕರಿಸಿದರು.
 
ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ  ನಮ್ಮ ನಡುವೆ ಅನೇಕ ಮಾದರಿಗಳಿವೆ. ಆದರೆ, ಅನುಕರಿಸಬಹುದಾದ ಮಾದರಿಗಳು ಕಡಿಮೆ. ಕನ್ನಡ ಸೇವೆಯಲ್ಲಿ ನಿರತರಾದ ಸೈಯ್ಯದ್ ಇಸಾಕ್ ಹಾಗೂ ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ ಪುರಸ್ಕೃತೆ ಆರ್. ಪೂರ್ಣಿಮಾ ಅವರಂತಹ ಅನುಕರಣೀಯ ಮಾದರಿಗಳನ್ನು ಗುರುತಿಸಿ ಗೌರವಿಸುತ್ತಿರುವ ಕರ್ನಾಟಕ ಪ್ರಕಾಶನ ಸಂಘದ ಶ್ರಮ ಶ್ಲಾಘನೀಯ ಎಂದರು.
 
ಈ ಸಂದರ್ಭದಲ್ಲಿ ಸೈಯ್ಯದ್ ಇಸಾಕ್ ಮಾತನಾಡಿ ನಾನು ವಿದ್ಯಾದೇಗುಲಕ್ಕೆ ತೆರಳಲಿಲ್ಲ, ವಿದ್ಯಾಭ್ಯಾಸ ಮಾಡಿಲ್ಲ. ಕೂಲಿ ಮಾಡಿಕೊಂಡು ಬದುಕಿದ್ದವ. ಕನ್ನಡದ ಬಗೆಗಿನ ಪ್ರೀತಿ ಹೆಚ್ಚಲು ಡಾ.ರಾಜಕುಮಾರ ಅವರ ಕನ್ನಡ ಸಿನಿಮಾಗಳೇ ಪ್ರೇರಣೆಯಾದವು.ಅದರಿಂದ ಕನ್ನಡ ಪುಸ್ತಕಗಳೆಡೆ ಆಸಕ್ತಿ ಬೆಳೆಯಿತು. ಅವುಗಳನ್ನು ತಂದು ತಂದು ಜೋಪಾನವಾಗಿರಿಸಿದ್ದೆ. ಈ ಕೆಲಸಕ್ಕೆ ಸಮಾಜ ನನ್ನನ್ನು ಗುರುತಿಸಿದೆ ಮಾತ್ರವಲ್ಲ. ಕನ್ನಡ ಸೇವೆಗೆ ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಹೇಳಿದರು.
 
ಡಾ. ರಾಜ್ ರ ಕನ್ನಡ ಕಳಕಳಿ, ಯುವಪೀಳಿಗೆಗೆ ಮಾದರಿಯಾಗಬೇಕು ಎಂದು ಆಶಿಸಿದ ಸೈಯ್ಯದ್ ಇಸಾಕ್, ತಮಗೆ ಪ್ರಶಸ್ತಿ ಲಭಿಸಿದ್ದರೂ ಹೊಣೆಗಾರಿಕೆ ಹೆಚ್ಚಿದೆ. ಆದ್ದರಿಂದ, ತಾವು ಮತ್ತಷ್ಟು ಕನ್ನಡ ಸೇವೆಗೆ ಬದ್ಧರಿರುವುದಾಗಿ ಹೇಳಿದರು.
 
ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ ಪುರಸ್ಕೃತೆ ಆರ್. ಪೂರ್ಣಿಮಾ ಸಮಾರಂಭದಲ್ಲಿ  ಮಾತನಾಡಿ, ಧೀಮಂತ ಮಹಿಳೆ, ಮೊಟ್ಟಮೊದಲ ಪ್ರಕಾಶಕಿಯ ಹೆಸರಿನಲ್ಲಿ ಪ್ರಶಸ್ತಿ ಲಭಿಸುತ್ತಿರುವುದು ತವರು ಮನೆಯಲ್ಲಿ ಬಾಗಿನ ಸಿಕ್ಕ ಸಂಭ್ರಮ ಹುಟ್ಟುಹಾಕಿದೆ ಎಂದರು.
 
ಲೇಖಕಿ ಡಾ ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಷರವಂತರು ಮಾತ್ರ ಸುಶಿಕ್ಷಿತರು ಎನ್ನಲಿಕ್ಕಾಗದು. ಸೈಯ್ಯದ್ ಇಸಾಕ್ ಅಂತಹ ವ್ಯಕ್ತಿಗಳು ಎಲೆಮರೆಯ ಕಾಯಿಯಂತೆ ಸದ್ದಿಲ್ಲದೇ ಸಾಹಿತ್ಯ ಸೇವೆ ಮಾಡುತ್ತಿದ್ದು, ಆರ್. ಪೂರ್ಣಿಮಾ ಅವರಂತಹ ದಿಟ್ಟ ಲೇಖಕಿಯರು ಅದೆಷ್ಟೋ ಮಹಿಳೆಯರಿಗೆ ದಾರಿ ತೋರಿದ್ದಾರೆ ಎಂದು ತಿಳಿಸಿದರು.
school

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ