ರೆಮಲ್ ಚಂಡಮಾರುತದ ಎಫೆಕ್ಟ್‌: ಕೇರಳಕ್ಕೆ ಇಂದೇ ಮುಂಗಾರು ಪ್ರವೇಶ ಸಾಧ್ಯತೆ

sampriya

ಗುರುವಾರ, 30 ಮೇ 2024 (17:51 IST)
Photo By X
ಬೆಂಗಳೂರು: ಕೇರಳ ಮತ್ತು ಈಶಾನ್ಯ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಗುರುವಾರ ಮುಂಗಾರು ಏಕಕಾಲದಲ್ಲಿ ಪ್ರವೇಶವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರೆಮಲ್ ಚಂಡಮಾರುತ ಪರಿಣಾಮ ನೈಋತ್ಯ ಮುಂಗಾರು ಸ್ವಲ್ಪ ವೇಗವಾಗಿ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಕೇರಳಕ್ಕೆ ಜೂನ್ 1 ರಂದು ಮುಂಗಾರು ಪ್ರವೇಶವಾಗುತ್ತದೆ. ಆದರೆ ಈ ಬಾರಿ ಎರಡು ದಿನಗಳ ಮುಂಚಿತವಾಗಿಯೇ ಪ್ರಾರಂಭವಾಗಿದೆ ಎಂದು ತಿಳಿಸಿದೆ.

ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್​, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನಲ್ಲಿ ಸಾಮಾನ್ಯವಾಗಿ ಜೂನ್​ 5ರಂದು ಮುಂಗಾರು ಪ್ರವೇಶಿಸುತ್ತಿತ್ತು. ಆದರೆ ಈ ಬಾರಿ ಬಹುಬೇಗವೇ ಮಳೆ ಶುರುವಾಗಲಿದೆ.

ಏಕಕಾಲಕ್ಕೆ ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಮುಂಗಾರು ಪ್ರವೇಶಿಸಲಿದೆ. 2017ರಲ್ಲಿ ಈ ವಿದ್ಯಾಮಾನ ನಡೆದಿತ್ತು. ಮೋರಾ ಚಂಡಮಾರುತದ ಕಾರಣದಿಂದ ಪೂರ್ವ ಕೇಂದ್ರ ಬಂಗಾಳಕೊಲ್ಲಿಯಲ್ಲಿ ಮುಂಗಾರು ಮಾರುತ ರೂಪುಗೊಂಡಿತ್ತು. ಈ ಬಾರಿ ರೆಮಲ್ ಚಂಡಮಾರುತದಿಂದಾಗಿ ಏಕಕಾಲಕ್ಕೆ ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಮಳೆಯಾಗಲಿದೆ.

ಮುಂದಿನ 24 ಗಂಟೆಗಳಲ್ಲಿ ಕೇರಳಕ್ಕೆ ಹಾಗೂ ಈಶಾನ್ಯ ರಾಜ್ಯಗಳ ಕೆಲ ಪ್ರದೇಶಗಳಿಗೆ ಮುಂಗಾರು ಪ್ರವೇಶಿಸಲು ಮತ್ತು ಮುನ್ನಡೆಯಲು ಅನುಕೂಲಕರ ವಾತಾವರಣ ಇದೆ. ಕಳೆದ ವರ್ಷ ಕೇರಳಕ್ಕೆ ಒಂದು ವಾರ ವಿಳಂಬವಾಗಿ ಮುಂಗಾರು ಪ್ರವೇಶಿಸಿತ್ತು.

ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದೆ. ಮೇ 31ಕ್ಕೆ ರಾಜ್ಯಕ್ಕೆ ಮುಂಗಾರು  ಪ್ರವೇಶಿಸುವ ಸಾಧ್ಯತೆಗಳಿವೆ. ನೈರುತ್ಯ ಮುಂಗಾರು ಮಳೆ ಕೇರಳದ ಮೂಲಕ ರಾಜ್ಯ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ