ಮಂಗಳೂರು: ಯಾಂತ್ರೀಕೃತ ಮೀನುಗಾರಿಕೆ ದೋಣಿಯನ್ನು ಬಳಸಿ ಕರ್ನಾಟಕದ ಕರಾವಳಿಯಲ್ಲಿ ಪ್ರತಿ ವರ್ಷ ಜೂನ್ 1 ರಿಂದ ಜುಲೈ 31ರ ವರೆಗೆ ಒಟ್ಟು 61 ದಿನಗಳ ಕಾಲ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಮೀನುಗಾರಿಕಾ ಯಾಂತ್ರೀಕೃತ ದೋಣಿಗಳು ಜೂನ್ 1 ರಿಂದ ದಡ ಸೇರಲಿವೆ.
ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಕೇವಲ 10 ಅಶ್ವ ಶಕ್ತಿಯ ವರೆಗಿನ ಸಾಮರ್ಥ್ಯದ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ/ ನಾಡದೋಣಿಗಳ ಮೂಲಕ ಮೀನುಗಾರಿಕೆಯಲ್ಲಿ ತೊಡಗಲು ಅನುಮತಿ ಇರುತ್ತದೆ. ಆದಾಗ್ಯೂ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಮೀನುಗಾರರ ಸುರಕ್ಷತೆಗಾಗಿ ನೀಡಲಾಗುವ ಸೂಚನೆ/ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದೆ.
ಮಾರ್ಗಸೂಚಿಯನ್ನು ಉಲ್ಲಂಘಿಸುವ ಮೀನುಗಾರಿಕೆ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ (ನಿಯಂತ್ರಣ) ಕಾಯ್ದೆಯನ್ವಯ ದಂಡನೆಗೆ ಹೊಣೆಯಾಗುವುದಲ್ಲದೇ, ಒಂದು ವರ್ಷದ ಅವಧಿಗೆ ರಾಜ್ಯ ಮಾರಾಟಕರ ರಹಿತ ಡೀಸೆಲ್ ಪಡೆಯಲು ಅನರ್ಹರಾಗುತ್ತಾರೆ.
ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಿರುವ ಮಾರ್ಗಸೂಚಿಯನ್ನು ಎಲ್ಲಾ ಮೀನುಗಾರರು ಪಾಲಿಸಿ, ಸಹಕರಿಸುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.