ಕಾಂಗ್ರೆಸ್ ಸರ್ಕಾರದಲ್ಲಿ ಟಕಾ ಟಕ್ ಮಾಯದ ಮಹಿಮೆ ಜೋರಾಗಿದೆ

Krishnaveni K

ಗುರುವಾರ, 30 ಮೇ 2024 (15:05 IST)
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಇಡೀ ಸಚಿವಸಂಪುಟದವರೇ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಚುನಾವಣಾ ಭಾಷಣದಲ್ಲಿ ಮಾತನಾಡಿ, ತಮ್ಮ ಸರಕಾರ ಬಂದ ಬಳಿಕ ಮಹಿಳೆಯರ ಬ್ಯಾಂಕ್ ಖಾತೆಗೆ ಟಕಾ ಟಕ್ ಟಕಾ ಟಕ್ ಹಣ ಹಾಕುವುದಾಗಿ ಹೇಳಿದ್ದಾರೆ. ಅದನ್ನು ಅನುಸರಿಸಿದ ಕಾಂಗ್ರೆಸ್ ಪಕ್ಷದ ಎಲ್ಲ ಸಚಿವರು, ಟಕ್ ಟಕಾ ಟಕ್ ಎಂಬಂತೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿಸಿದರು.

4ರಂದು 25 ಕೋಟಿ ಟಕಾ ಟಕ್ ವರ್ಗಾವಣೆ, 6ರಂದು 25 ಕೋಟಿ ಟಕಾ ಟಕ್ ವರ್ಗಾವಣೆ, 21ರಂದು 44 ಕೋಟಿ ಟಕಾ ಟಕ್ ವರ್ಗಾವಣೆ, ರಾಜ್ಯ ಖಜಾನೆಯಿಂದ 43 ಕೋಟಿ ವರ್ಗಾವಣೆ ಟಕಾ ಟಕ್ ಎಂಬಂತೆ ನಡೆದಿದೆ. ಮತ್ತೆ 21ರಂದು 50 ಕೋಟಿ ರೂ. ಟಕಾ ಟಕ್ ಟ್ರಾನ್ಸ್‍ಫರ್ ಆಗಿದೆ. ಕಾಂಗ್ರೆಸ್ಸಿನವರು ಇಷ್ಟು ಮೊತ್ತವನ್ನು ಅವರ ಲೂಟಿ ಖಾತೆಗೆ ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಇದೊಂದು ಬ್ರಹ್ಮಾಂಡ ಭ್ರಷ್ಟಾಚಾರ ಎಂದು ಟೀಕಿಸಿದರು.

187 ಕೋಟಿ ನುಂಗಲು ಒಬ್ಬ ಮಂತ್ರಿಯಿಂದ ಸಾಧ್ಯವಿಲ್ಲ. ಇದು ಸಣ್ಣ ಮೊತ್ತವೇನಲ್ಲ. ಅವರ ಜೀವನ, ಅವರು, ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಸಂತೃಪ್ತಿಯಿಂದ ಬದುಕುವಷ್ಟು ದುಡ್ಡು ಇದು ಎಂದು ನುಡಿದರು.
 
25 ಸಾವಿರ ಕೋಟಿ ದಲಿತರ ಹಣ ಮಾಯ..
ರಾಹುಲ್ ಗಾಂಧಿಯವರು ಹೇಳಿದಂತೆ 25 ಸಾವಿರ ಕೋಟಿ ದಲಿತರ ಹಣ ಮಾಯವಾಗಿದೆ. ಎಲ್ಲಿಗೆ ಹೋಯಿತು? ಯಾರಿಗೆ ಹೋಯಿತೆಂದು ಗೊತ್ತಿಲ್ಲ. ಯಾವುದಕ್ಕೆ ಬಳಸಿದರೆಂದೂ ಗೊತ್ತಿಲ್ಲ. ಇವತ್ತು ಅಧಿಕಾರಿಗಳು ಟಕಾ ಟಕ್ ಎಂದು ಸತ್ತು ಹೋಗುತ್ತಿದ್ದಾರೆ. ಬಿತ್ತನೆ ಬೀಜದ ಬೆಲೆ ಇವತ್ತು ಟಕಾ ಟಕ್ ಎಂದು ಶೇ 70 ರಷ್ಟು ಏರಿಕೆ ಕಂಡಿದೆ ಎಂದು ಆರ್. ಅಶೋಕ್ ಅವರು ದೂರಿದರು.
 
ಕಾಂಗ್ರೆಸ್ಸಿನವರಿಗೆ ರಾಮ ಕಂಡರೆ ಆಗುವುದಿಲ್ಲ. ವಾಲ್ಮೀಕಿ ಮಹರ್ಷಿಯನ್ನು ಕಂಡರೆ ಆಗೋಲ್ಲ ಎಂದು ಈಗ ಗೊತ್ತಾಗಿದೆ. ಆ ನಿಗಮದ ಹೆಸರಿನಲ್ಲಿ ಇದ್ದ 187 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಕಾಂಗ್ರೆಸ್ಸಿನ ಒಂದು ವರ್ಷದ ಸಾಧನೆ ಎಂದು ಟೀಕಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ