ಬೆಂಗಳೂರಿನಲ್ಲಿ ಇಂದು 5 ರಿಂದ 6 ಕಡೆ ಉದ್ಯೋಗ ಮೇಳ ನಡೆಯುತ್ತದೆ. ಅದರಲ್ಲಿ ಮಹಾಲಕ್ಷ್ಮಿ ಲೇಔಟ್ ನಲ್ಲಿ ಸಹ ಒಂದು. ಇಂದಿನ ಉದ್ಯೋಗ ಮೇಳದಲ್ಲಿ 100 ಕಿಂತ ಹೆಚ್ಚು ಕಂಪನಿಗಳು ಆಗಮಿಸಿದ್ದು, ಉದ್ಯೋಗ ಮೇಳದಲ್ಲಿ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೀಡಲಾಗುವುದು ಎಂದು ಸ್ಥಳೀಯ ಶಾಸಕರು ಮತ್ತು ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಭೋವಿಪಾಳ್ಯದ ಬಿಜಿಎಸ್ ಕಾಲೇಜು ಕ್ಯಾಂಪಸ್ ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಶ್ರೀ ಮಹಾಲಕ್ಷ್ಮಿ ಎಜುಕೇಶನಲ್ ಟ್ರಸ್ಟ್ ವತಿಯಿಂದ ನಡೆದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರು, ಮಾಜಿ ಉಪಮೇಯರ್ ಎಸ್. ಹರೀಶ್, ಬಿಜೆಪಿ ಮುಖಂಡರುಗಳಾದ ಜಯರಾಮ್, ರಾಜೇಂದ್ರ ಕುಮಾರ್, ರಾಘವೇಂದ್ರ ಶೆಟ್ಟಿ, ವೆಂಕಟೇಶ್ ಮೂರ್ತಿ, ಪದ್ಮಾವತಿ ಶ್ರೀನಿವಾಸ್, ನಾಗರತ್ನ ಲೋಕೇಶ್ ಸೇರಿದಂತೆ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.