ಬೆಂಗಳೂರು: ಕೋವಿಡ್‌ನ ಕರಾಳ ನೆನಪು ಮಾಸುವ ಮುನ್ನ ಮತ್ತೆ ಸೋಕಿನ ಹಾವಳಿ ರಾಜ್ಯದಲ್ಲೂ ಕಾಣಿಸಿಕೊಂಡಿದೆ. ಕೇರಳ, ಆಂಧ್ರಪ್ರದೇಶದಲ್ಲಿ ಸೋಂಕು ಪತ್ತೆಯಾದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಒಂಬತ್ತು ತಿಂಗಳ ಮಗುವಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ.
ಮೇ 22 ರಂದು ರಾಪಿಡ್ ಆಂಟಿಜೆನ್ ಪರೀಕ್ಷೆ (ಆರ್‌ಎಟಿ) ಮೂಲಕ ಮಗುವಿಗೆ ಪಾಸಿಟಿವ್ ಬಂದಿದೆ. ಮಗುವಿನ ಆರೋಗ್ಯ ಸ್ಥಿರವಾಗಿದೆ. ಪ್ರಸ್ತುತ ಬೆಂಗಳೂರಿನ ಕಲಾಸಿಪಾಳ್ಯದ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳುಮಾಹಿತಿ ನೀಡಿದ್ದಾರೆ.
ಮಗು ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆಯದ್ದಾಗಿದ್ದು, ಆರಂಭದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಮಗು ಜ್ವರದಿಂದ ಬಳಲುತ್ತಿತ್ತು. ಹೊಸಕೋಟೆಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೇ 22 ರಂದು ಕೊರೊನಾ ಪರೀಕ್ಷೆ ನಡೆಸಿದ್ದು, ಮಗುವಿಗೆ ಸೋಂಕು ಇರುವುದು ದೃಢಪಟ್ಟಿದೆ.
ವೈದ್ಯರ ಶಿಫಾರಸ್ಸಿನ ಮೇರೆಗೆ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಿಕಿತ್ಸೆ ಮುಂದುವರಿದಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಮೇ 19 ರಂದು, ಭಾರತದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 257ರಷ್ಟಿತ್ತು. ಮೇ 21 ರಂದು ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ 16 ಸಕ್ರಿಯ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಬೆಂಗಳೂರಿನಲ್ಲಿ ಕೊರೊನಾ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
==