ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್ಸಿಆರ್)ದ ವಾಯುಮಾಲಿನ್ಯದ ಸಮಸ್ಯೆಗೆ ಪ್ರಮುಖ ಕಾರಣಗಳೆಂದರೆ ಧೂಳು, ಸಾರಿಗೆ ವಾಹನಗಳು, ಕೈಗಾರಿಕೆಗಳು, ವಾಹನ ದಟ್ಟಣೆ ಮತ್ತು ಕೆಲವು ಪ್ರದೇಶಗಳಲ್ಲಿ ರೈತರು ಹೊಲಕ್ಕೆ ಬೆಂಕಿಹಚ್ಚುವ ರೂಢಿ ಹೊಂದಿರುವುದು ಎಂದು ಕೋರ್ಟ್ ಹೇಳಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ನಾಳೆ(ನ.16) ತುರ್ತುಸಭೆಯೊಂದನ್ನು ನಡೆಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಸಭೆಯಲ್ಲಿ ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸುವುದು, ಅನಗತ್ಯ ವಾಹನ ಸಂಚಾರ ಮತ್ತು ವಿದ್ಯುತ್ ಘಟಕಗಳನ್ನು ನಿಲ್ಲಿಸುವುದು, ನಾಗರೀಕರಿಗೆ ವರ್ಕ್ ಫ್ರಂ ಹೋಂ ಅವಕಾಶ ಕಲ್ಪಿಸುವುದು ಮುಂತಾದ ಬಗ್ಗೆ ಚರ್ಚಿಸಲು ಕೋರ್ಟ್ ನಿರ್ದೇಶಿಸಿದೆ.
ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಎನ್ಸಿಆರ್ ಪ್ರದೇಶಗಳನ್ನು ಹೊಂದಿರುವ ಇತರ ರಾಜ್ಯಗಳಾ ಪಂಜಾಬ್, ಉತ್ತರಪ್ರದೇಶ ಮತ್ತು ಹರಿಯಾಣದ ಮುಖ್ಯ ಕಾರ್ಯದರ್ಶಿಗಳು ಈ ತುರ್ತು ಸಭೆಯಲ್ಲಿ ಭಾಗವಹಿಸಬೇಕು. ಸಭೆಯಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳವವರೆಗೆ, ಈ ಪ್ರದೇಶದ ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಂ ಕಡ್ಡಾಯಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಆದೇಶಿಸಿದೆ.