ನಕಲಿ ಸರ್ಫ್ ಎಕ್ಸ್‌ಎಲ್ ಪುಡಿಯ ಪ್ಯಾಕೆಟ್ ತಯಾರಿಕೆ

ಗುರುವಾರ, 11 ನವೆಂಬರ್ 2021 (21:08 IST)
ಬೆಂಗಳೂರು: ಬಟ್ಟೆ ಒಗೆಯಲು ಬಳಸುವ ಸರ್ಫ್ ಎಕ್ಸ್‌ಎಲ್‌ ಪುಡಿಯ ಪ್ಯಾಕೆಟ್‌ಗಳನ್ನು ನಕಲಿಯಾಗಿ ತಯಾರು ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ದಾಳಿಯಲ್ಲಿ 6 ಲಕ್ಷ ರೂ ಮೌಲ್ಯದ 13,080 ಸರ್ಫ್ ಎಕ್ಸ್‌ಎಲ್ ಪ್ಯಾಕೇಟ್‌ಗಳು ಹಾಗೂ ವಶ ಪಡಿಸಿಕೊಳ್ಳಲಾಗಿದೆ. 
 
ಉತ್ತಮ್ ಸಿಂಗ್, ತನ್‌ ಸಿಂಗ್, ಮೊದಾರಾಮ್ ಹಾಗೂ ಜಾಲಮ್‌ ಸಿಂಗ್ ರಾಥೋಡ್ ಎಂದು ಬಂಧಿತ ಆರೋಪಿಗಳನ್ನು ಗುರುತಿಸಲಾಗಿದೆ, ಇವರೆಲ್ಲರ ವಿರುದ್ಧ ದಕ್ಷಿಣ ವಿಭಾಗದ  ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್‌ ಪಾಟೀಲ್ ತಿಳಿಸಿದ್ದಾರೆ. 
 
ಹನುಮಂತನಗರದ ರಾಘವೇಂದ್ರ ಬ್ಲಾಕ್ ನ 14ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ನಾಲ್ವರು ಸೇರಿಕೊಂಡು ನಕಲಿ ಸರ್ಫ್‌ಎಕ್ಸ್‌ಎಲ್ ಬಟ್ಟೆ ಒಗೆಯುವ ಪುಡಿಯನ್ನು ತಯಾರು ಮಾಡಿ ಅಸಲಿ ಸರ್ಫ್ ಎಂದು ಬಿಂಬಿಸಿ ಮಾರಾಟ ಮಾಡಲು ಪ್ಯಾಕೇಟ್ ಗಳನ್ನು ಸಿದ್ಧಪಡಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಸ್ಥಳದಲ್ಲಿದ್ದ 13,080 ನಕಲಿ ಸರ್ಫ್ ಎಕ್ಸ್‌ಎಲ್ ಪ್ಯಾಕೆಟ್‌ಗಳು, ತಯಾರು ಮಾಡಲು ಬಳಸುತ್ತಿದ್ದ ಮಷಿನ್ ಹಾಗೂ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ನಾಲ್ವರನ್ನು ಬಂಧಿಸಿದ್ದಾರೆ ಎಂದಿದ್ದಾರೆ. 
 
ಎರಡು ತಿಂಗಳಿನಿಂದ ತಯಾರಿಕೆ: 
 
ಆರೋಪಿಗಳು ಕಳೆದ ಎರಡು ತಿಂಗಳಿನಿಂದ ಈ ಸ್ಥಳದಲ್ಲಿ ನಕಲಿ ಸಫ್ ಎಕ್ಸ್‌ಎಲ್ ಪ್ಯಾಕೇಟ್‌ಗಳನ್ನು ತಯಾರು ಮಾಡುತ್ತಿರುವುದಾಗಿದೆ ವಿಚಾರಣೆಯ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
 
ಸಿಸಿಬಿ ಟೀಮ್: 
 
ಉಪ ಪೊಲೀಸ್ ಆಯುಕ್ತ ಬಿ.ಎಸ್.ಅಂಗಡಿ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಹನುಮಂತರಾಯ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಗಳಾದ ರವಿಪಾಟೀಲ್, ಶಿವಪ್ರಸಾದ್, ರಹೀಂ, ಶ್ರೀಧರ್‌ ಪೂಜಾರ್‌ ಹಾಗೂ ಸಿಬ್ಬಂದಿ ಈ ದಾಳಿ  ಕೈಗೊಂಡಿದ್ದರು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್‌ ಪಾಟೀಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ