ಕಾಸು ಸಿಗದೇ ಕಾಂಗ್ರೆಸ್ ಶಾಸಕರು ಕಂಗಾಲು: ಸಿಎಂ ಸಿದ್ದರಾಮಯ್ಯಗೇ ಶಾಸಕರು ತಾಕೀತು ಮಾಡಿದ್ದೇನು

Krishnaveni K

ಶುಕ್ರವಾರ, 19 ಜುಲೈ 2024 (10:26 IST)
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.

KPCC ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲ್, ಹೆಚ್.ಸಿ.ಮಹದೇವಪ್ಪ, ಬೋಸ್ ರಾಜು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲ್, ಮುಖ್ಯ ಸಚೇತಕ ಅಶೋಕ್ ಪಟ್ಟಣ್, CLP ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಸೇರಿ ಹಲವರು ಉಪಸ್ಥಿತರಿದ್ದರು.‌

ಈ ಸಭೆಯಲ್ಲಿ ಶಾಸಕರ ಆಕ್ರೋಶದ ಕಟ್ಟೆ ಹರಿದಿತ್ತು. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ನೆಪದಲ್ಲಿ ಶಾಸಕರಿಗೆ ಸರಿಯಾಗಿ ಅನುದಾನ ಸಿಗುತ್ತಿಲ್ಲ ಎಂಬ ಮಾತುಗಳಿವೆ.  ಆ ಬಗ್ಗೆ ಈ ಸಭೆಯಲ್ಲಿ ಶಾಸಕರು ನೇರವಾಗಿ ಸಿಎಂ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ. ಮೊದಲು ಅನುದಾನ ಕೊಡಿಸಿ, ಆಮೇಲೆ ಉಳಿದ ವಿಚಾರ ಮಾತನಾಡಿ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ ಎನ್ನಲಾಗಿದೆ.

ಕೆಲವು ಸಚಿವರ ಕಾರ್ಯವೈಖರಿಯ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ. ಈ ಏಳೆಂಟು ಸಚಿವರನ್ನು ಬದಲಾವಣೆ ಮಾಡಬೇಕು. ಈ ಸಚಿವರ ಬಳಿ ಅನುದಾನ ಕೊಡಿಸಲು ಹೇಳಬೇಕು. ಅನುದಾನ ಇಲ್ಲದೇ ಕ್ಷೇತ್ರಕ್ಕೆ ಕಾಲಿಡಲು ಕಷ್ಟವಾಗುತ್ತಿದೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಕೆಲವು ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ