ನೇಹಾಳ ಹತ್ಯೆಗೆ ಫಯಾಜ್ ವಾರದಿಂದ ಮಾಡಿದ್ದ ಸಂಚು ಒಂದೊಂದೇ ಬಯಲು

Krishnaveni K

ಗುರುವಾರ, 25 ಏಪ್ರಿಲ್ 2024 (11:30 IST)
ಹುಬ್ಬಳ್ಳಿ: ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಮಾಡಿದ ಆರೋಪಿ ಫಯಾಜ್ ನನ್ನು ಸಿಐಡಿ ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಆತನ ಬಗ್ಗೆ ಒಂದೊಂದೇ ವಿಚಾರಗಳು ಬಯಲಾಗುತ್ತಿವೆ.

ಕಾಲೇಜಿನಲ್ಲಿ ನೇಹಾಳನ್ನು ಹತ್ಯೆ ಮಾಡುವ ಮೊದಲು ಆಕೆಯನ್ನು ಮಾತನಾಡಿಸಲು ಯತ್ನಿಸಿದ್ದಾನೆ. ಆಕೆ ಮಾತನಾಡಿಸಲಿಲ್ಲವೆಂದು ಚಾಕುವಿನಿಂದ ಇರಿದಿದ್ದಾನೆ. ಇದು ಹಠಾತ್ ಆಗಿ ಆತ ಮಾಡಿದ್ದು ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಹಠಾತ್ ನಡೆದ ಘಟನೆಯಲ್ಲ, ಇಂತಹದ್ದೊಂದು ಕೃತ್ಯ ನಡೆಸಲು ಆತ ವಾರದಿಂದ ತಯಾರಿ ನಡೆಸಿದ್ದ ಎಂಬುದು ತನಿಖೆ ವೇಳೆ ದೃಢಪಟ್ಟಿದೆ.

ಕೃತ್ಯ ನಡೆಸುವ ಮೊದಲು ಫಯಾಜ್ ನೇಹಾಳ ಮನೆ, ಕಾಲೇಜು ಸುತ್ತಮುತ್ತ ಓಡಾಡಿದ್ದ. ನೇಹಾ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ. ಹತ್ಯೆ ನಡೆಸುವ ಐದು ದಿನಗಳ ಮೊದಲು ಚಾಕು ಖರೀದಿಸಿಟ್ಟುಕೊಂಡಿದ್ದ. ಅಂದರೆ ಆತ ಹತ್ಯೆ ಮಾಡಲು ಮೊದಲೇ ಯೋಜನೆ ರೂಪಿಸಿದ್ದ ಎಂಬುದು ಪಕ್ಕಾ ಆಗಿದೆ.

ಕೃತ್ಯ ನಡೆಸಿದ ದಿನ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಬಂದಿದ್ದ. ವಾಹನವನ್ನು ರಸ್ತೆ ಕಡೆ ಮುಖ ಮಾಡಿ ನಿಲ್ಲಿಸಿದ್ದ. ಕೃತ್ಯ ನಡೆಸಿ ತಕ್ಷಣವೇ ಅಲ್ಲಿಂದ ಪರಾರಿಯಾಗಲು ಯೋಜನೆ ರೂಪಿಸಿದ್ದ. ಅದಕ್ಕೆಂದೇ ವಾಹನ ಪಾರ್ಕ್ ಮಾಡಿ ಪ್ರಾಕ್ಟಿಕಲ್ ಪರೀಕ್ಷೆ ನಡೆಯುತ್ತಿದ್ದ ಹಾಲ್ ನಲ್ಲಿ ನೇಹಾಗಾಗಿ ಕಾದು ಕುಳಿತಿದ್ದ. ನೇಹಾ ಹೊರಗೆ ಬಂದ ಮೇಲೆ ಮಾತನಾಡಿಸಲು ಪ್ರಯತ್ನಿಸಿದ್ದಾನೆ. ಆಕೆ ನಿರಾಕರಿಸಿದಾಗ ಚಾಕು ಹಾಕಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಈ ವೇಳೆ ಸಾರ್ವಜನಿಕರು ಆತನನ್ನು ಹಿಡಿದಿದ್ದಾರೆ. ಫಯಾಜ್ ನನ್ನು 6 ದಿನಗಳ ಕಾಲ ವಶಕ್ಕೆ ಪಡೆದಿರುವ ಸಿಐಡಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಈ  ವೇಳೆ ವಿದ್ಯಾರ್ಥಿಗಳು ಫಯಾಜ್ ವಿರುದ್ಧ ಜೋರಾಗಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ