ನೇಹಾ ಸಮಾಧಿ ಮುಂದೆ ತಂದೆ ನಿರಂಜನ್ ಹಿರೇಮಠ್ ಮಾಡಿದ ಪ್ರತಿಜ್ಞೆಯೇನು

Krishnaveni K

ಬುಧವಾರ, 24 ಏಪ್ರಿಲ್ 2024 (10:59 IST)
ಹುಬ್ಬಳ‍್ಳಿ: ಇತ್ತೀಚೆಗಷ್ಟೇ ಮಗಳು ನೇಹಾಳನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಹುಬ್ಬಳ್ಳಿ ಕಾರ್ಪೋರೇಟರ್ ನಿರಂಜನ್ ಹೀರೇಮಠ್ ಆಕೆಯ ಸಮಾಧಿ ಮುಂದೆ ಪ್ರತಿಜ್ಞೆ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೊನ್ನೆಯಷ್ಟೇ ನೇಹಾ ಹೀರೇಮಠ್ ಎನ್ನುವ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಆಕೆಯ ಸಹಪಾಠಿ, ಅನ್ಯಕೋಮಿನ ಫಯಾಜ್ ಎಂಬಾತ ಕಾಲೇಜು ಕ್ಯಾಂಪಸ್ಸಿನಲ್ಲೇ ಚಾಕುವಿನಿಂದ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದ. ತನ್ನ ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ನೇಹಾಳ ಪ್ರಾಣ ತೆಗೆದಿದ್ದ ಕಿರಾತಕ.

ಈ ಘಟನೆ ರಾಜ್ಯದಾದ್ಯಂತ ಸಂಚಲನ ಮೂಡಿಸಿತ್ತು. ನೇಹಾ ಅಂತಿಮ ಸಂಸ್ಕಾರಕ್ಕೆ ನೂರಾರು ಜನ ಸೇರಿದ್ದರು. ಹಲವು ರಾಜಕೀಯ ನಾಯಕರು ಈಗಾಗಲೇ ನೇಹಾ ಮನೆಗೆ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದೀಗ ನೇಹಾ ತಂದೆ ಮಗಳ ಸಮಾಧಿ ಮುಂದೆ ಮಂಡಿಯೂರಿ ಕುಳಿತು ಕೈ ನೆಲಕ್ಕೆ ತಟ್ಟಿ ಪ್ರತಿಜ್ಞೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ನಿನ್ನ ಪ್ರಾಣ ತೆಗೆದವನ ಸುಮ್ನೆ ಬಿಡಲ್ಲ ನೇಹಾ. ನಿನ್ನ ಸಾವಿಗೆ ನ್ಯಾಯ ಕೊಡಿಸಿಯೇ ಕೊಡಿಸುತ್ತೇನೆ. ನಿನ್ನ ಆತ್ಮಕ್ಕೆ ಶಾಂತಿ ಕೊಟ್ಟೇ ಕೊಡುತ್ತೇನೆ. ಅದಕ್ಕಾಗಿ ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ ಎಂದು ಜೋರಾಗಿ ಅತ್ತುಕೊಂಡು ಪ್ರತಿಜ್ಞೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಒಬ್ಬ ತಂದೆಯ ನೋವು ಯಾರಿಗೂ ಅರ್ಥವಾಗದು ಎಂದಿದ್ದಾರೆ. ನೇಹಾ ಹತ್ಯೆ ಪ್ರಕರಣವನ್ನು ಈಗಾಗಲೇ ರಾಜ್ಯ ಸರ್ಕಾರ ಸಿಒಡಿ ತನಿಖೆಗೆ ಒಪ್ಪಿಸಿದೆ. ಹಂತಕ ಫಯಾಜ್ ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ