ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣದಲ್ಲಿ ಯಾರು ರಾಜಕೀಯ ಮಾಡಬಾರದು. ಸಿಐಡಿ ತನಿಖೆ ಮೂಲಕ ಆಕೆಗೆ ನ್ಯಾಯ ಸಿಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಬಿಡ್ನಾಳದಲ್ಲಿರುವ ನೇಹಾ ನಿವಾಸಕ್ಕೆ ತೆರಳಿ ಆಕೆಯ ಪೋಷಕರಿಗೆ ಸಾಂತ್ವನ ಹೇಳಿದರು.
'ನೇಹಾ ನಮ್ಮ ಕನ್ನಡದ ಮಗಳು. ಆಕೆ ನಮ್ಮ ಮನೆಯ ಸದಸ್ಯೆಯಂತೆ. ಈ ಘಟನೆ ಬಗ್ಗೆ ಅತ್ಯಂತ ದುಃಖವಿದ್ದು, ನಾವೆಲ್ಲ ನೇಹಾ ಕುಟುಂಬದ ಜತೆಗೆ ಇರುತ್ತೇವೆ. ಆಕೆ ಸಾವಿಗೆ ನ್ಯಾಯ ಕೊಡಿಸುವುದು ಸರ್ಕಾರ ಕರ್ತವ್ಯ. ಆರೋಪಿಗೆ ಗಲ್ಲುಶಿಕ್ಷೆಯಾಗಬೇಕು ಎನ್ನುವುದು ನಮ್ಮ ಆಗ್ರಹವಾಗಿದ್ದು, ಈಗಾಗಲೇ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. 90 ದಿನಗಳಲ್ಲಿ ನ್ಯಾಯ ಸಿಗುವ ಭರವಸೆಯಿದೆ' ಎಂದು ಹೇಳಿದರು.
ಇನ್ನು ಸಾವಿನ ಮನೆಯಲ್ಲಿ ಬಿಜೆಪಿಯವರು ರಾಜಕಾರಣ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ನೇಹಾ ಹಿರೇಮಠ್ ನಮ್ಮ ಮಗಳು ನಮ್ಮ ಕರ್ನಾಟಕದ ಮಗಳು ಇಂದು ಹುಬ್ಬಳ್ಳಿಯಲ್ಲಿರುವ ನೇಹಾರವರ ಮನೆಗೆ ಭೇಟಿ ನೀಡಿ ಅವರ ತಂದೆ ಶ್ರೀ ನಿರಂಜನ ಹಿರೇಮಠ, ಅವರ ತಾಯಿ, ಸಹೋದರ ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ನೇಹಾರವರ ಸಾವಿಗೆ ನನ್ನ ಸಂತಾಪ ಸೂಚಿಸಿದೆ.
ಈ ಸಂದರ್ಭದಲ್ಲಿ ನನ್ನೊಂದಿಗೆ ಕಾನೂನು ಸಚಿವರಾದ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ್ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ ಹಾಗೂ ಮತ್ತಿತರ ಮುಖಂಡರು ಜೊತೆಗಿದ್ದರು. ನಿರಂಜನ ಹಿರೇಮಠ ರವರು ನಮ್ಮ ಕುಟುಂಬದ ಭಾಗವಾಗಿದ್ದು ಅವರ ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ನೇಹಾರವರ ಸಾವಿಗೆ ನ್ಯಾಯ ದೊರಕಿಸಿ ಕೊಡುವುದಾಗಿ ಅವರ ಕುಟುಂಬಕ್ಕೆ ಭರವಸೆ ನೀಡಿದ್ದೇವೆ. ಈ ನಿಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಈ ಕೆಳಗಿನ ನಿರ್ಧಾರಗಳನ್ನು ತೆಗೆದುಕೊಂಡಿದೆ.
1. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.
2. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಮತ್ತು ಕರ್ನಾಟಕ ಸರ್ಕಾರವು ಈ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ.
90 ರಿಂದ 120 ದಿನಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದೇವೆ. 3. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಲಿದ್ದು ಕೊಲೆಗಾರನಿಗೆ ನೇಣು ಹಾಕುವ ಮೂಲಕ ಮರಣದಂಡನೆಯ ಶಿಕ್ಷೆ ನೀಡುವಂತೆ ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದೇವೆ. ನೇಹಾಗೆ ನ್ಯಾಯ ದೊರಕಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಹಾಗಾಗಿ ಆರೋಪಿಗೆ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸುವ ಮೂಲಕ ಯಾರೂ ಕೂಡ ಇಂತಹ ಅಪರಾಧ ಎಸಗಲು ಭಯ ಪಡುವಂತಹ ಶಿಕ್ಷೆಯನ್ನು ವಿಧಿಸಲು ಪ್ರಯತ್ನಿಸುತ್ತೇವೆ.