ತಗ್ಗಿ ಬಗ್ಗಿ ನಡೀತೀವಿ ಬಿಡಿ ಎಂದಿದ್ದಕ್ಕೆ ಜಯನಗರಕ್ಕೆ ಕೊನೆಗೂ ಸಿಕ್ತು ಅನುದಾನ

Krishnaveni K

ಶುಕ್ರವಾರ, 6 ಡಿಸೆಂಬರ್ 2024 (14:17 IST)
ಬೆಂಗಳೂರು: ತಮ್ಮ ವಿರುದ್ಧ ಆರೋಪ ಮಾಡಿದ್ದಕ್ಕೆ ಪ್ರತೀಕಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಜಯನಗರ ಕ್ಷೇತ್ರಕ್ಕೆ ಅನುದಾನ ತಡೆಹಿಡಿದಿದ್ದರು. ಇದೀಗ ಕೊನೆಗೂ ಅನುದಾನ ಬಿಡುಗಡೆಯಾಗಿದೆ.

ಬೆಂಗಳೂರಿನಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 27 ಕ್ಷೇತ್ರಗಳಿಗೂ ಡಿಸಿಎಂ ಡಿಕೆ ಶಿವಕುಮಾರ್ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಜಯನಗರ ಕ್ಷೇತ್ರಕ್ಕೆ ಮಾತ್ರ ಅನುದಾನ ತಡೆಹಿಡಿದಿದ್ದರು. ಇದು ಭಾರೀ ವಿವಾದಕ್ಕೆ ಗುರಿಯಾಗಿತ್ತು.

ಇದಕ್ಕೆ ಮೊದಲು ಜಯನಗರದ ಬಿಜೆಪಿ ಶಾಸಕ ರಾಮಮೂರ್ತಿ ಬೆಂಗಳೂರಿನ ಅಭಿವೃದ್ಧಿ ಡಿಕೆ ಶಿವಕುಮಾರ್ ಸಚಿವರಾದ ಮೇಲೂ ಸಂಪೂರ್ಣ ಅಧೋಗತಿಯಾಗಿದೆ ಎಂದು ಟೀಕಿಸಿದ್ದರು. ಸಾಮಾನ್ಯವಾಗಿ ವಿಪಕ್ಷಗಳು ಈ ರೀತಿ ಆಡಳಿತ ಸರ್ಕಾರವನ್ನು ಟೀಕೆ ಮಾಡುವುದು ಸಾಮಾನ್ಯ. ಆದರೆ ಶಾಸಕ ರಾಮಮೂರ್ತಿ ಟೀಕೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡ ಡಿಕೆ ಶಿವಕುಮಾರ್, ಒಂದೋ ಎಲ್ಲಿ ಅಧೋಗತಿಯಾಗಿದೆ ಎಂದು ತೋರಿಸಲಿ ಇಲ್ಲಾ ತಮ್ಮ ಮಾತಿಗೆ ಕ್ಷಮೆ ಕೇಳಲಿ. ಇಲ್ಲಾಂದ್ರೆ ಅನುದಾನ ಬಿಡುಗಡೆ ಮಾಡಲ್ಲ ಎಂದು ಪಟ್ಟು ಹಿಡಿದಿದ್ದರು.

ಹೀಗಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅನುದಾನ ಬಿಡುಗಡೆ ಮಾಡುವಂತೆ ಡಿಕೆಶಿಗೆ ಮನವಿ ಮಾಡಿದ್ದರು. ಆಗ ಬೇರೆಯವರ ಬಳಿ ಇರುವಂತೆ ಅಲ್ಲ, ನನ್ನ ಬಳಿ ತಗ್ಗಿ ಬಗ್ಗಿ ಇರಬೇಕು ಎಂದು ವಾರ್ನಿಂಗ್ ಮಾಡಿದ್ದರು. ಡಿಕೆಶಿಯ ಈ ಹೇಳಿಕೆಯೂ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.

ಇಷ್ಟೆಲ್ಲಾ ರದ್ದಾಂತಗಳಾದ ಮೇಲೆ ಶಾಸಕ ರಾಮಮೂರ್ತಿ ಆಯ್ತಪ್ಪಾ ನೀವು ಹೇಳಿದಂತೇ ನಡೆಯೋಣ, ಈಗ ಅನುದಾನ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದರು. ಹೀಗೆ ಈಗ ಕೊನೆಗೂ ಡಿಕೆ ಶಿವಕುಮಾರ್ ಅನುದಾನ ಬಿಡುಗಡೆ ಮಾಡಿದ್ದಾರೆ. ಎಲ್ಲಾ ಕ್ಷೇತ್ರಗಳಂತೆ ಜಯನಗರಕ್ಕೂ 10 ಕೋಟಿ ರೂ. ಅನುದಾನ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ