ಮಂಗಳೂರು: ಒಂದು ಕಾಲದಲ್ಲಿ ಆರ್ ಎಸ್ಎಸ್ ಕಟ್ಟಾಳುವಾಗಿದ್ದ, ಬಿಜೆಪಿಯಲ್ಲಿದ್ದ ಪುತ್ತೂರು ಶಾಸಕ ಅಶೋಕ್ ರೈ ಈಗ ಕಾಂಗ್ರೆಸ್ ಸೇರಿದ್ದು ಯಾಕೆ? ಇದನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಅಶೋಕ್ ರೈ ಈಗ ಪುತ್ತೂರಿನ ಜನಪ್ರಿಯ ಶಾಸಕರು. ಅವರನ್ನು ಒಂದು ಪಕ್ಷದ ನಾಯಕರಾಗಿ ನೋಡುತ್ತಿಲ್ಲ. ಜನ ಅವರ ಕೆಲಸಗಳಿಂದಲೇ ಅವರನ್ನು ಹೊಗಳುತ್ತಿದ್ದಾರೆ. ಸದಾ ಜನರಿಗೆ ಸಿಗುವ ನಾಯಕ ಎಂಬ ಅಭಿಪ್ರಾಯ ಜನರಲ್ಲಿದೆ.
ಅಶೋಕ್ ಒಂದು ಕಾಲದಲ್ಲಿ ಬಿಜೆಪಿಯ ನಾಯಕರಾಗಿದ್ದವರು. ಸ್ಥಳೀಯವಾಗಿ ಯಾವುದೇ ದೇವಾಲಯಗಳಿಗೆ ಸೇವೆ, ಕೆಲಸವಾಗಬೇಕಿದ್ದರೆ ಮುಂದಾಳತ್ವ ವಹಿಸುತ್ತಿದ್ದವರು. ಈಗಲೂ ಅವರು ಇತರೆ ಕಾಂಗ್ರೆಸ್ ಕೆಲವು ನಾಯಕರಂತೆ ಒಂದು ಧರ್ಮವನ್ನು ಓಲೈಸುವ ಕೆಲಸ ಮಾಡಲ್ಲ. ಹಾಗಿದ್ದರೂ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಯಾಕೆ ಎಂಬುದನ್ನು ಅವರು ಹೇಳಿದ್ದಾರೆ.
ನಾನು, ಅರುಣ್ ಕುಮಾರ್ ಪುತ್ತಿಲ ಕೂಡಾ ಬಿಜೆಪಿಯಲ್ಲಿ ಇದ್ದವರು. ನಮ್ಮನ್ನು ಇಬ್ಬರನ್ನೂ ತುಳಿಯುವ ಕೆಲಸವನ್ನು ಆ ಪಕ್ಷದಲ್ಲಿದ್ದವರು ತಮ್ಮ ಉನ್ನತಿಗಾಗಿ ತುಳಿಯುವ ಕೆಲಸ ಮಾಡಿದರು. ನಮ್ಮನ್ನು ತುಳಿದಿದ್ದರಿಂದ ಅವರಿಗೇ ತೊಂದರೆಯಾಗಿದೆ ಹೊರತು, ನಮಗೆ ಏನೂ ಸಮಸ್ಯೆಯಾಗಲಿಲ್ಲ. ನಾನು ಕಾಂಗ್ರೆಸ್ ಗೆ ಬಂದು ಶಾಸಕನಾದೆ, ಅರುಣ್ ಕುಮಾರ್ ಪುತ್ತಿಲ ತಮ್ಮದೇ ಸಂಘಟನೆ ಕಟ್ಟಿಕೊಂಡು ಅವರ ಕೆಲಸವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
ಇದು ಕೇವಲ ಅಶೋಕ್ ರೈ ಮಾತಲ್ಲ. ಇತ್ತೀಚೆಗೆ ಪುತ್ತೂರಿನ ಜನರೇ ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲಗೆ ಟಿಕೆಟ್ ನೀಡಿ ಎಂದು ಬಿಜೆಪಿ ಬೆಂಬಲಿಗರು ಹೇಳಿದರೂ ನಾಯಕರು ಕೇಳಲಿಲ್ಲ. ತಮ್ಮದೇ ಹಠಕ್ಕೆ ಬಿದ್ದು ಸೋತರು. ಇದೇ ರೀತಿ ಮುಂದುವರಿದರೆ ಮುಂದೆ ಪುತ್ತೂರು ಕ್ರಮೇಣ ಬಿಜೆಪಿ ಹಿಡಿತದಿಂದ ಕೈತಪ್ಪುವುದು ಗ್ಯಾರಂಟಿಯಾಗಿದೆ ಎಂದು ಸ್ಥಳೀಯರೇ ಮಾತನಾಡಿಕೊಳ್ಳುತ್ತಿದ್ದಾರೆ.