ಗುತ್ತಿಗೆದಾರ ಚೆಲುವರಾಜು ಎಂಬಾತನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್ ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಮುನಿರತ್ನ ಎ1, ಅವರ ಸಹಾಯಕ ವಿಜಯ್ ಕುಮಾರ್ ಎ2, ಸೆಕ್ಯುರಿಟಿ ಅಭಿಷೇಕ್ ಎ3, ವಸಂತ ಕುಮಾರ್ ಎ4 ಆರೋಪಿಯನ್ನಾಗಿ ಮಾಡಲಾಗಿದೆ.
ಇದೀಗ ಪೊಲೀಸರು ವಿಚಾರಣೆಗೆ ಹಾಜರಾಗಲು ಮುನಿರತ್ನಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಅವರು ಪೊಲೀಸರ ನೋಟಿಸ್ ಗೆ ಸ್ಪಂದಿಸದೇ ಇದ್ದರೆ ಅವರ ಬಂಧನವಾದರೂ ಅಚ್ಚರಿಯಿಲ್ಲ. ಗುತ್ತಿಗೆದಾರ ಚೆಲುವರಾಜು ನನಗೆ ಶಾಸಕ ಮುನಿರತ್ನ ಜೀವ ಬೆದರಿಕೆ ಹಾಕಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಗೆ ದೂರು ನೀಡಿದ್ದರು.
ಶಾಸಕ ಮುನಿರತ್ನ ನನ್ನಿಂದ 20 ಲಕ್ಷ ರೂ. ಹಣವನ್ನು ಸೆಪ್ಟೆಂಬರ್ 9 ರೊಳಗಾಗಿ ನೀಡುವಂತೆ ತಾಕೀತು ಮಾಡಿದ್ದರು. ಒಂದು ವೇಳೆ ಕೊಡದೇ ಇದ್ದರೆ ರೇಣುಕಾಸ್ವಾಮಿಗೆ ಆದ ಗತಿಯೇ ನಿನಗೂ ಆಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪವಾಗಿದೆ. ಅಶ್ಲೀಲ ಮೆಸೇಜ್ ಕಳುಹಿಸಿದ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ನಟ ದರ್ಶನ್ ಚಿತ್ರದುರ್ಗದಿಂದ ಕರೆಸಿ ಹಲ್ಲೆ ನಡೆಸಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ ಎಂದು ಆರೋಪವಿದೆ. ಈತನಂತೇ ನಿನಗೂ ಆಗುತ್ತದೆ ಎಂದು ಗುತ್ತಿಗೆದಾರನಿಗೆ ಮುನಿರತ್ನ ಬೆದರಿಕೆ ಹಾಕಿದ್ದಾರೆ ಎಂಬುದು ಆರೋಪವಾಗಿದೆ.