ಅಡಿಕೆಗೆ ಕೊಳೆ ರೋಗ: ಬೆಳೆಗಾರರು ಕಂಗಾಲು
ರಾಜ್ಯದ ಕರಾವಳಿಯಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗ ತಗುಲಿದೆ. ಅಡಿಕೆ ಬೆಳೆಗಾರರು ಕಂಗಾಲಾಗಿದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.
ಅಡಿಕೆ ಬೆಳೆಗೆ ಕೊಳೆ ರೋಗ ತಗುಲಿ ಅಂದಾಜು ಸುಮಾರು 100 ಕೋಟಿ ರೂ. ನಷ್ಟ ಆಗಿರ ಬಹುದೆಂದು ಅಂದಾಜಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಹಳ್ಳಿಗೆ ಹೋದರೂ ಕೊಳೆ ರೋಗ ಬಗ್ಗೆ ಚರ್ಚೆ ಆಗುತ್ತಿದೆ. ತೋಟದಲ್ಲಿ ಸಣ್ಣ ಅಡಿಕೆಗಳು ರಾಶಿ ಬಿದ್ದಿವೆ. ಮಳೆಯಿಂದ ಒದ್ದೆ ಆಗಿರುವ ಈ ಅಡಿಕೆಯನ್ನು ಪರ್ಯಾಯವಾಗಿ ಬಳಸುವಂತಿಲ್ಲ. ಬಹುತೇಕ ಎಲ್ಲಾ ಅಡಿಕೆ ಬೆಳೆಗಾರರು ಈ ಬಾರಿ ಮೂರು ಇಲ್ಲವೇ ನಾಲ್ಕು ಬಾರಿ ಅಡಿಕೆ ಮರಕ್ಕೆ ಔಷಧ ಸಿಂಪಡಣೆ ಮಾಡಿದ್ದಾರೆ.
ಆದರೆ ಮಳೆರಾಯನ ಅಬ್ಬರದ ಎದುರು ಅಡಿಕೆ ಉದುರುವುದು ನಿಂತಿಲ್ಲ. ಈಗ ಮಳೆ ನಿಂತಿದೆ. ತೋಟದಲ್ಲಿ ಅಡಿಕೆಯು ನೆಲಕ್ಕುರುಳಿದೆ. ಶೇಕಡಾ 80 ಕ್ಕೂ ಹೆಚ್ಚು ತೋಟಗಳು ಕೊಳೆ ರೋಗಕ್ಕೆ ಬಲಿಯಾಗಿವೆ.