ಮುಂಬೈನಿಂದ ಮಂಡ್ಯಕ್ಕೆ ಬಂತು ಡೆಡ್ಲಿ ಕೊರೊನಾ : ಒಂದೇ ದಿನ 8 ಕೇಸ್
ಶುಕ್ರವಾರ, 1 ಮೇ 2020 (16:22 IST)
ಡೆಡ್ಲಿ ವೈರಸ್ ಮಂಡ್ಯದಲ್ಲಿ ಎಂಟು ಜನರಲ್ಲಿ ಇರೋದು ದೃಢಪಟ್ಟಿದೆ. ಆ ಮೂಲಕ ಸಕ್ಕರೆ ನಾಡಿನಲ್ಲಿ ಮಹಾಮಾರಿಯ ವಿಷ ಏರತೊಡಗಿದೆ.
ಮಂಡ್ಯದ ಪಾಂಡವಪುರ ತಾಲೂಕು ಮೇಲುಕೋಟೆ ಸಮೀಪದ ಬಿ.ಕೊಡಗಹಳ್ಳಿ ಗ್ರಾಮದಲ್ಲಿ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ.
ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಬಿ.ಕೊಡಗಹಳ್ಳಿಯ ವ್ಯಕ್ತಿಯು, ಹತ್ತು ದಿನಗಳ ಹಿಂದೆ ಮೃತಪಟ್ಟಿದ್ದನು. ಹೀಗಾಗಿ ಮೃತನ ಶವವನ್ನು ಹುಟ್ಟೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಈತ ಮುಂಬೈ ನಿವಾಸಿಯಾಗಿದ್ದರಿಂದ ಅನುಮಾನದ ಮೇರೆಗೆ ಮೃತನ ಕುಟುಂಬದವರನ್ನು ಕೆರೆತೊಣ್ಣೂರು ಗ್ರಾಮದ ಹಾಸ್ಟೆಲ್ಲೊಂದರಲ್ಲಿ ಹಾಸ್ಟೆಲ್ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.
ಅವರ ವೈದ್ಯಕೀಯ ಪರೀಕ್ಷೆ ವರದಿ ಬಂದಿದ್ದು, ನಾಲ್ಕು ಮಂದಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೊಡಗಹಳ್ಳಿ ಗ್ರಾಮವನ್ನು ಶೀಲ್ ಡೌನ್ ಮಾಡಲಾಗಿದೆ. ಮೇಲುಕೋಟೆ ಕೂಡ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ಮಂಡ್ಯದಲ್ಲಿ ಇಬ್ಬರು ಯುವಕರು, ಒಬ್ಬಳು ಯುವತಿ ಮೂವರು ಬಾಂಬೆ ಟ್ರಾವೆಲ್ ಹಿಸ್ಟರಿ ಹೊಂದಿದ್ದರೆ ಇವರ ಜೊತೆ ಗುರ್ತಿಸಿಕೊಂಡಿದ್ದ ಕೆ.ಆರ್.ಪೇಟೆಯ ಮಹಿಳೆಯಲ್ಲಿರೂ ಕೊರೊನಾ ಕಾಣಿಸಿಕೊಂಡಿದೆ. ಇನ್ನು, ಮಳವಳ್ಳಿಯಲ್ಲಿ ಯುವಕ, ಮಹಿಳೆ ಹಾಗೂ ಇಬ್ಬರು ಗಂಡು ಮಕ್ಕಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಒಟ್ಟು ಒಂದೇ ದಿನ 8 ಕೊರೊನಾ ಪಾಸಿಟಿವ್ ಕೇಸ್ ಗಳಿಗೆ ಮಂಡ್ಯ ಸಾಕ್ಷಿಯಾಗಿದೆ.