ಒಮೈಕ್ರಾನ್ ಪ್ರಕರಣ ತೀವ್ರ ಹೆಚ್ಚಳ; ದೈನಂದಿನ ಕೊರೋನ ಸೋಂಕು ಪ್ರಕರಣ 1 ಲಕ್ಷಕ್ಕೇರುವ ಭೀತಿ

ಗುರುವಾರ, 23 ಡಿಸೆಂಬರ್ 2021 (20:07 IST)
ಫ್ರಾನ್ಸ್‌ನಲ್ಲಿ ಒಮೈಕ್ರಾನ್ ಸೋಂಕಿನ ಜತೆಗೆ ಕೊರೋನ ಸೋಂಕಿನ ಪ್ರಕರಣವೂ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು ಮಂಗಳವಾರ ಒಂದೇ ದಿನ ಸುಮಾರು 73,000 ಹೊಸ ಸೊಂಕಿನ ಪ್ರಕರಣ ದಾಖಲಾಗಿದ್ದು ಕಳೆದೊಂದು ವಾರದಿಂದ ಸರಾಸರಿ 50,000 ದೈನಂದಿನ ಸೋಂಕು ಪ್ರಕರಣ ದಾಖಲಾಗುತ್ತಿದೆ. ಸೋಂಕು ಉಲ್ಬಣಿಸಲು ಒಮೈಕ್ರಾನ್ ರೂಪಾಂತರಿ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಫ್ರಾನ್ಸ್‌ನಲ್ಲಿ ವರದಿಯಾಗಿರುವ ಹೊಸ ಸೋಂಕಿನ ಪ್ರಕರಣದ 20%ದಷ್ಟು ಮತ್ತು ಪ್ಯಾರಿಸ್ ವಲಯದಲ್ಲಿ ವರದಿಯಾಗಿರುವ ಪ್ರಕರಣದ 35%ದಷ್ಟು ಒಮೈಕ್ರಾನ್ ರೂಪಾಂತರಿ ಪ್ರಕರಣವಾಗಿದೆ . ಕ್ರಿಸ್ಮಸ್ ಮತ್ತು ಹೊಸ ವರ್ಷದ ನಡುವಿನ ಅವಧಿಯಲ್ಲಿ ದಾಖಲಾಗುವ ಬಹುತೇಕ ಹೊಸ ಪ್ರಕರಣಗಳು ಒಮೈಕ್ರಾನ್ ಸೋಂಕು ಆಗಿರಬಹುದು ಎಂದು ಆರೋಗ್ಯ ಸಚಿವ ಡಾ. ಒಲಿವಿಯರ್ ವೆರಾನ್ ಹೇಳಿದ್ದಾರೆ.
ಒಂದಂತೂ ಖಚಿತವಾಗಿದೆ. ಒಮೈಕ್ರಾನ್ ಅತ್ಯಂತ ಸಾಂಕ್ರಾಮಿಕವಾಗಿದೆ ಮತ್ತು ತೀವ್ರವಾಗಿ ಹರಡುತ್ತದೆ. ಯಾವ ದೇಶವೂ ಇದರಿಂದ ತಪ್ಪಿಸಿಕೊಳ್ಳಲಾಗದು. ಲಸಿಕೆ ಪಡೆದರೆ ತುಸು ಪರಿಣಾಮ ಬೀರಬಹುದು ಎಂದವರು ಹೇಳಿದ್ದಾರೆ.
2022ರ ಚುನಾವಣೆಯಲ್ಲಿ ಸೋಂಕಿನ ನಿರ್ವಹಣೆ ವಿಷಯ ಮಹತ್ವದ ಅಜೆಂಡಾ ಆಗುವ ಸಾಧ್ಯತೆಯಿರುವುದರಿಂದ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಒಮೈಕ್ರಾನ್ ಸೋಂಕಿನ ಹರಡುವಿಕೆಯ ಬಗ್ಗೆ ನಿಕಟ ನಿಗಾ ವಹಿಸಿದ್ದಾರೆ. ಆದರೆ, ನೆರೆಯ ದೇಶ ನೆದರ್ಲ್ಯಾಂಡಿನಂತೆ ಫ್ರಾನ್ಸ್ ಕ್ರಿಸ್ಮಸ್ ಸಂದರ್ಭದಲ್ಲಿ ಮತ್ತೆ ಕಠಿಣ ನಿರ್ಬಂಧ ಜಾರಿಗೊಳಿಸಿಲ್ಲ. ಫ್ರಾನ್ಸ್‌ನಲ್ಲಿ ಆರೋಗ್ಯ ಕಾರ್ಡ್ ಎಂಬ ಕಠಿಣ ನಿಯಮ ಜಾರಿಯಲ್ಲಿದ್ದು ಇದು ಪೂರ್ಣಪ್ರಮಾಣದ ಲಸಿಕೆ ಪಡೆದಿರುವುದಕ್ಕೆ,ಕೊರೋನ ಸೋಂಕಿನಿಂದ ಚೇತರಿಸಿಕೊಂಡಿರುವುದಕ್ಕೆ ಪುರಾವೆಯಾಗಿದೆ. ಹೋಟೆಲ್, ಸಿನೆಮಾ ಮಂದಿರ ಮುಂತಾದ ಸ್ಥಳಗಳಿಗೆ ಪ್ರವೇಶ ಪಡೆಯಲು ಆರೋಗ್ಯ ಕಾರ್ಡ್ ಅತ್ಯಗತ್ಯವಾಗಿದೆ.
ಇದೀಗ ಆರೋಗ್ಯ ಕಾರ್ಡ್ ನಿಯಮದಲ್ಲಿ ಬದಲಾವಣೆ ಮಾಡಲು ಸರಕಾರ ನಿರ್ಧರಿಸಿದ್ದು ಪೂರ್ಣ ಪ್ರಮಾಣದ ಲಸಿಕೆ ಪಡೆದವರಿಗೆ ಮಾತ್ರ ಆರೋಗ್ಯ ಕಾರ್ಡ್ ಎಂಬ ಹೊಸ ನಿಯಮ ಜಾರಿಯಾಗಲಿದೆ. ಫ್ರಾನ್ಸ್ ನಲ್ಲಿ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಇತ್ತೀಚಿನ ವಾರದಲ್ಲಿ ಹೆಚ್ಚಿದ್ದು ಸುಮಾರು 16,000 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಆಸ್ಪತ್ರೆಗಳ ತೀವ್ರನಿಗಾ ಘಟಕದ 60% ಹಾಸಿಗೆಗಳಲ್ಲಿ ಕೊರೋನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನವರು ಡೆಲ್ಟಾ ರೂಪಾಂತರದ ಸೋಂಕಿಗೆ ಒಳಗಾಗಿದ್ದರೂ ಪ್ಯಾರಿಸ್ ವಲಯದಲ್ಲಿ 3ರಲ್ಲಿ ಒಂದು ಸೋಂಕು ಪ್ರಕರಣ ಒಮೈಕ್ರಾನ್‌ಗೆ ಸಂಬಂಧಿಸಿದ್ದು ಎಂದು ಫ್ರಾನ್ಸ್ ಸರಕಾರದ ವಕ್ತಾರ ಗ್ಯಾಬ್ರಿಯೆಲ್ ಅಟ್ಟಲ್ ಹೇಳಿದ್ದಾರೆ.
ದೇಶದಲ್ಲಿನ 12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ನಾಗರಿಕರಲ್ಲಿ 89%ಕ್ಕೂ ಅಧಿಕ ಜನತೆ 2 ಡೋಸ್ ಲಸಿಕೆ ಪಡೆದಿದ್ದರೆ, ಪ್ರತೀ ಮೂವರಲ್ಲಿ ಒಬ್ಬರು ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ. ಈ ಮಧ್ಯೆ, ಡಿಸೆಂಬರ್ 22ರಿಂದ ದೇಶದಲ್ಲಿ 5ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ದೊರಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ