ಮೊಟ್ಟೆ ಮಾರಾಟದಿಂದ ಫುಲ್ ಖುಷ್ ಆದ ಸಚಿವ

ಗುರುವಾರ, 7 ಮೇ 2020 (20:22 IST)
ಕೋಳಿ ಮಾಂಸ ಹಾಗೂ ಮೊಟ್ಟೆ ಮಾರಾಟದಿಂದಾಗಿ ಸಚಿವರೊಬ್ಬರು ಫುಲ್ ಖುಷ್ ಆಗಿದ್ದಾರೆ.  

ಸದ್ಯ ಕುಕ್ಕುಟೋದ್ಯಮ ಚೇತರಿಕೆ ಕಾಣುತ್ತಿದ್ದು, ಕೋಳಿ ಮಾಂಸ ಮತ್ತು ಮೊಟ್ಟೆಯ ಮಾರಾಟದಲ್ಲಿ ಗಣನೀಯವಾದ ಏರಿಕೆಯಾಗಿರುವುದು ಸಂತಸ ತಂದಿದೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

 ಕೋವಿಡ್-19 ಲಾಕ್‌ಡೌನಗಿಂತ ಮೊದಲು ರಾಜ್ಯದಲ್ಲಿ ಪ್ರತಿ ದಿನ ಸುಮಾರು 600 ರಿಂದ 700 ಮೆಟ್ರಿಕ್ ಟನ್ ಕೋಳಿ ಮಾಂಸ ಮಾರಾಟವಾಗುತ್ತಿತ್ತು. ಲಾಕ್‌ಡೌನ ಅವಧಿಯಲ್ಲಿ  ಪ್ರತಿ ದಿನ ಸುಮಾರು 85.14 ಮೆಟ್ರಿಕ್ ಟನ್‌ಗೆ ಇಳಿಕೆಯಾಗಿರುವುದು ಕಂಡುಬಂದಿತು. ಪ್ರತಿದಿನ ನಿರಂತರವಾಗಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದ್ದು ಸಾರ್ವಜನಿಕರ ಬಳಕೆಗೆ ಕೋಳಿ ಮಾಂಸ ಲಭ್ಯವಾಗುವಂತೆ ಮಾಡಿರುವುದರಿಂದ ಸದ್ಯ ಕೋಳಿ ಮಾಂಸದ ಬಳಕೆ ಸುಮಾರು 368.54 ಮೆಟ್ರಿಕ ಟನ್‌ಗೆ ಏರಿದೆ ಎಂದಿದ್ದಾರೆ.   
ರಾಜ್ಯದಲ್ಲಿ ಲಾಕ್‌ಡೌನ್ ಅವಧಿಗೂ ಪೂರ್ವದಲ್ಲಿ ಪ್ರತಿ ದಿನ ಸುಮಾರು 130 ರಿಂದ 150 ಲಕ್ಷ ಕೋಳಿ ಮೊಟ್ಟೆ ಸಾರ್ವಜನಿಕರು ಸೇವಿಸುತ್ತಿದ್ದರು. ಕೋವಿಡ್-19 ಲಾಕ್‌ಡೌನ ಅವಧಿಯಲ್ಲಿ ಕೋಳಿ ಮೊಟ್ಟೆ ಬಳಕೆಯ ಪ್ರಮಾಣ 37 ಲಕ್ಷಕ್ಕೆ ಇಳಿಕೆಯಾಗಿತ್ತು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಮೊಟ್ಟೆ ಮತ್ತು ಮಾಂಸದ ಬಳಕೆ ಹೆಚ್ಚಿಸುವಲ್ಲಿ ಇಲಾಖೆಯಿಂದ ಸಾಕಷ್ಟು ಕ್ರಮಕೈಗೊಳ್ಳಲಾಗಿತ್ತು. ಸದ್ಯ ಮೊಟ್ಟೆಯ ಬಳಕೆ 107.88 ಲಕ್ಷಗಳಿಗೆ ಏರಿಕೆಯಾಗಿದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ