ಬೆಂಗಳೂರು: ಬೆಳಗಾವಿಯಲ್ಲಿ ಕರ್ನಾಟಕ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ ಬಳಿಕ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಶಾಂತಿ ಕಾಪಾಡಲು ಮಹಾರಾಷ್ಟ್ರದವರಿಗೆ ಮನವಿ ಮಾಡ್ತೀನಿ ಎಂದಿದ್ದಾರೆ.
ಬೆಳಗಾವಿಯಲ್ಲಿ ಕರ್ನಾಟಕ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಬಳಿಕ ಕನ್ನಡ ಪರ ಹೋರಾಟಗಾರರು ಮಹಾರಾಷ್ಟ್ರ ಬಸ್ ಗೆ ಕಪ್ಪು ಮಸಿ ಬಳಿದು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಈಗ ಮತ್ತೆ ಕರ್ನಾಟಕದ ಬಸ್ ಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕೇಸರಿ ಬಣ್ಣ ಬಳಿದು ಮರಾಠಿಗರು ತಿರುಗೇಟು ನೀಡಿದ್ದರು.
ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಪರಮೇಶ್ವರ್ ನಾನು ಮಹಾರಾಷ್ಟ್ರದವರಿಗೆ ಮನವಿ ಮಾಡುತ್ತೇನೆ ಈ ವಿಚಾರದಲ್ಲಿ ರಾಜಕೀಯ ಬೇಡ, ಶಾಂತಿ ಕಾಪಾಡಬೇಕು ಎಂದಿದ್ದಾರೆ.
ಇಂದೂ ಕೂಡಾ ಬೆಳಗಾವಿ ಗಡಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ಹೋರಾಟ ಮುಂದುವರಿದಿದೆ. ಇಂದೂ ಕೂಡಾ ಕರ್ನಾಟಕ ಬಸ್ ತಡೆದು ಡ್ರೈವರ್ ಮುಖಕ್ಕೆ ಕೇಸರಿ ಬಣ್ಣದ ಬಳಿದು ಮರಾಠಿಗರು ಮತ್ತೆ ಪುಂಡಾಟ ಮೆರೆದಿದ್ದಾರೆ.