ಬೆಂಗಳೂರು: ಬಳ‍್ಳಾರಿ ಗಣಿ ದಣಿ, ಗಾಲಿ ಜನಾರ್ಧನ ರೆಡ್ಡಿ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇಂದು ಅವರು ತಮ್ಮ ಬೆಂಬಲಿಗರೊಡನೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ಈ ಮೊದಲು ಯಡಿಯೂರಪ್ಪ ಸರ್ಕಾರ ಮೊದಲ ಬಾರಿಗೆ ಕರ್ನಾಟಕದಲ್ಲಿ ಬರಲು ಪ್ರಮುಖ ಪಾತ್ರವಹಿಸಿದ್ದ ಜನಾರ್ಧನ ರೆಡ್ಡಿ ಬಳಿಕ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಲುಕಿ ರಾಜಕೀಯದಿಂದ ಕೊಂಚ ದೂರವಾದರು. ಇತ್ತೀಚೆಗೆ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಿಂದ ದೂರವಾಗಿ ತಮ್ಮದೇ ಪಕ್ಷ ಕಟ್ಟಿಕೊಂಡು ಗಂಗಾವತಿಯಲ್ಲಿ ಗೆದ್ದು ಶಾಸಕರಾದರು.
ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಬೆಂಬಲವಿಲ್ಲದೇ ಬಿಜೆಪಿಗೆ ದೊಡ್ಡ ಹೊಡೆತವಾಗಿತ್ತು. ಇದೀಗ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ನಾಯಕರು ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಮನವೊಲಿಸಿದ್ದಾರೆ. ಇದೀಗ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಮ್ಮುಖದಲ್ಲಿ ಮತ್ತೆ ಬಿಜೆಪಿಗೆ ಮರಳಲಿದ್ದಾರೆ.
ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿವೆ. ಮುಂದೆ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯಾಗಿ ಮಾಡುವುದು ನಮ್ಮ ಗುರಿಯಾಗಿದೆ. ಎಲ್ಲರೂ ಒಟ್ಟಾಗಿ ಮತ್ತೆ ಮೋದಿಯನ್ನು ಪ್ರಧಾನಿ ಮಾಡಲು ಶ್ರಮಿಸಲಿದ್ದೇವೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.