ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ 120 ಕೇಂದ್ರಗಳ ಪ್ರಾರಂಭ
ಭಾನುವಾರ, 23 ಡಿಸೆಂಬರ್ 2018 (14:52 IST)
ಬಿಸಿಲುನಾಡು ಖ್ಯಾತಿಯ ಜಿಲ್ಲೆಯ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವೀಂಟಲ್‍ಗೆ 6100 ರೂ.ದರದಲ್ಲಿ ತೊಗರಿ ಖರೀದಿಸಲು ಒಟ್ಟು 120 ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕರ್ಫೋಸ್ ಸಮಿತಿ ಅಧ್ಯಕ್ಷ ಆರ್.ವೆಂಕಟೇಶಕುಮಾರ ತಿಳಿಸಿದ್ದಾರೆ.
ತೊಗರಿ ಬೆಳೆದ ರೈತರು ಹತ್ತಿರವಿರುವ ಯಾವುದೇ ತೊಗರಿ ಖರೀದಿ ಕೇಂದ್ರಕ್ಕೆ ಅವಶ್ಯಕ ದಾಖಲಾತಿಗಳೊಂದಿಗೆ ಆನಲೈನನಲ್ಲಿ ಡಿಸೆಂಬರ 24 ರಿಂದ 2019ರ ಜನವರಿ 07 ರವರೆಗೆ ನೊಂದಾಯಿಸಬಹುದಾಗಿದೆ. ರೈತರಿಂದ ಪ್ರತಿ ಎಕರೆಗೆ 5 ಕ್ವೀಂಟಲ್ ರಂತೆ ಪ್ರತಿ ರೈತರಿಂದ ಗರಿಷ್ಟ 10 ಕ್ವೀಂಟಲ್ ತೊಗರಿ ಖರೀದಿಸಲಾಗುವುದು. ಖರೀದಿ ಕೇಂದ್ರಗಳಲ್ಲಿ ತೊಗರಿ ಉತ್ಪನ್ನವನ್ನು ಖರೀದಿಸುವ ಪೂರ್ವದಲ್ಲಿ ರೈತರು ನೀಡಿರುವ ವಿವರವನ್ನು ನಾಫೇಡ್ ಸಂಸ್ಥೆಯ ತಂತ್ರಾಂಶದೊಂದಿಗೆ ಭೂಮಿ, ಬೆಳೆ ತಂತ್ರಾಂಶ, ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಿ ನಂತರ ನೋಂದಾಯಿಸಿಕೊಳ್ಳಲಾಗುವುದು.
ಕಂದಾಯ ಇಲಾಖೆಯ ಸಿಬ್ಬಂದಿಗಳು ಬೆಳೆ ಬಿತ್ತನೆ ಪ್ರಮಾಣ ಪತ್ರ ನೀಡುತ್ತಿದ್ದು ಸುಳ್ಳು ದಾಖಲಾತಿ ಹಾಗೂ ಅವ್ಯವಹಾರ ಕಂಡು ಬಂದರೆ ಸಂಬಂದಪಟ್ಟವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.